ಹಾಸನ/ಶ್ರವಣಬೆಳಗೂಳ: ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಶ್ರವಣಬೆಳಗೊಳದ ಬೆಟ್ಟವೇ ಅಲುಗಾಡಿದೆ. ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲುಗಳು ಮಳೆಯಿಂದಾಗಿ ಸಡಿಲಗೊಂಡು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಹೌದು, ಒಂದೂವರೆ ತಿಂಗಳಿನಿಂದ ಸುರಿದ ಭಾರಿ ಮಳೆಗೆ ವಿಶ್ವವಿಖ್ಯಾತ ಎಂಟನೇ ಅದ್ಭುತಗಳಲ್ಲಿ ಒಂದಾಗಿರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕಾಂಪೌಂಡ್ ಕುಸಿದಿದೆ. ಬೆಟ್ಟ ಹತ್ತಿ ದರ್ಶನಕ್ಕೆ ಹೋಗುವ ಕೊನೆಯ ಮೆಟ್ಟಿಲಿಗೆ ಹಾಕಿರುವ ಕಾಂಪೌಂಡ್ ವರುಣನ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ಕಾಂಪೌಂಡಿನ ಕಲ್ಲುಗಳು ಮೆಟ್ಟಿಲುಗಳ ಮೇಲೆ ಬಂದು ಬಿದ್ದಿದ್ದು ಪ್ರವಾಸಿಗರು ಹತ್ತಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.
ಇನ್ನು ಬೆಟ್ಟದ ತಪಲಿನ ಕೆಳಗಿರುವ ವಿಶ್ರಾಂತಿ ಸ್ಥಳದಲ್ಲಿ ಬೃಹತ್ ಬೆಟ್ಟದ ಮೇಲಿನ ಕಲ್ಲೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆ ರಾತ್ರಿ ನಡೆದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿವೆ.