ಅರಕಲಗೂಡು: ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹೊಳೆನರಸೀಪುರ ರಸ್ತೆಯಲ್ಲಿರುವ ಅನಧಿಕೃತ ಮಳಿಗೆಗಳನ್ನು ತೆರವು ಮಾಡಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತನ್ನ ಸುಪರ್ದಿಗೆ ಪಡೆಯಲು ಆಗಮಿಸಿ ವಾಪಸ್ಸಾದ ಘಟನೆ ನಡೆದಿದೆ.
ಅನಧಿಕೃತ ಮಳಿಗೆಗಳ ತೆರವಿಗೆ ಧಾವಿಸಿದ ಅಧಿಕಾರಿಗಳು ವಾಪಸ್ - ಅನಧಿಕೃತ ಮಳಿಗೆಗಳ ತೆರವು ಕಾರ್ಯ ಸ್ಥಗಿತ
ಹೊಳೆನರಸೀಪುರ ರಸ್ತೆಯಲ್ಲಿರುವ ಅನಧಿಕೃತ ಮಳಿಗೆಗಳನ್ನು ತೆರವು ಮಾಡಲು ಬಂದ ವೇಳೆ ವಾರಸುದಾರರು ಒಂದು ವಾರ ಸಮಯಾವಕಾಶ ಕೇಳಿದ್ದು ಅಧಿಕಾರಿಗಳು ತೆರವು ಕಾರ್ಯ ಮಾಡದೇ ವಾಪಸ್ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ವ ನಿರೀಕ್ಷಕಿ ಚೇತನ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಮಳಿಗೆ ನಿರ್ಮಾಣ ಮಾಡಿರುವ ಬಗ್ಗೆ ಮಳಿಗೆದಾರರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ನೋಟಿಸ್ ನೀಡಿರುತ್ತೇವೆ. ಆದರೆ ಯಾವುದೇ ರೀತಿಯ ನೋಟಿಸ್ಗೆ ಅವರು ಉತ್ತರ ನೀಡಿಲ್ಲ. ಹಾಗಾಗಿ ಈ ದಿನ ತೆರವುಗೊಳಿಸಲು ಬಂದಿರುವುದಾಗಿ ತಿಳಿಸಿ, ನಂತರ ತೆರವುಗೊಳಿಸಲು ಮುಂದಾದಾಗ ಮಳಿಗೆ ನಿರ್ಮಾಣ ಮಾಡಿರುವ ವಾರಸುದಾರರು ಒಂದು ವಾರದೊಳಗೆ ತಾವೇ ತೆರವು ಮಾಡುತ್ತೇವೆ ಕಾಲಾವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಒಂದು ವಾರ ಸಮಯ ನೀಡಿದ್ದೇವೆ. ಒಂದು ವೇಳೆ ತೆರವುಗೊಳಿಸದಿದ್ದರೆ, ಕಾನೂನು ಕ್ರಮ ವಹಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕ ಲಿಂಗರಾಜು ಮುಂತಾದವರು ಇದ್ದರು.