ಹಾಸನ : ಹಾಸನವನ್ನು ಪಾಕಿಸ್ತಾನದ ರೀತಿ ನೋಡದೆ ನಮ್ಮ ಜನರ ಬದುಕನ್ನು ಉಳಿಸುವತ್ತ ಮುಖ್ಯಮಂತ್ರಿ ಕ್ರಮಕೈಗೊಳ್ಳಬೇಕು. ಗುಲ್ಬರ್ಗ ಸಂಸದರ ಕೈಯಲ್ಲಿ ಚುಚ್ಚುಮದ್ದು ಕೊಟ್ಟು ಕಳಿಸುವ ಹಾಗೆ ಹಾಸನಕ್ಕೆ ಚುಚ್ಚುಮದ್ದನ್ನು ಪೂರೈಕೆ ಮಾಡಬೇಕು.
ಇಲ್ಲವಾದಲ್ಲಿ ನಾನೇ ಮುಖ್ಯಮಂತ್ರಿಯ ಮನೆ ಮುಂದೆ ಮಲಗಿ ಧರಣಿ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಾಸನ ಕೂಡ ಡೇಂಜರ್ ಜಿಲ್ಲೆ ಎಂದು ಘೋಷಣೆ ಮಾಡುವ ಸಾಧ್ಯತೆ ಇದ್ರೂ, ಸರ್ಕಾರ ಇದರ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಾಸನದಲ್ಲಿ ಪ್ರತಿಯೊಬ್ಬರೂ ಪರೀಕ್ಷೆಗಳೊಳಗಾದರೇ, ಕನಿಷ್ಠ ಪ್ರತಿದಿನ 5000 ಸೋಂಕಿತರು ಪತ್ತೆ ಆಗುತ್ತಾರೆ.
ಕುಮಾರಸ್ವಾಮಿ ಸರ್ಕಾರ ಇದ್ದಾಗ ಆಸ್ಪತ್ರೆ ನಿರ್ಮಾಣಕ್ಕೆ 250 ಕೋಟಿ ಕೊಟ್ಟಿದ್ದರು. ಅವತ್ತು ಕುಮಾರಸ್ವಾಮಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆಸ್ಪತ್ರೆ ನಿರ್ಮಾಣ ಮಾಡದಿದ್ದರೆ ಇಂದು ಹಾಸನದ ಜನರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕನಿಷ್ಠ 5:5 ವೆಂಟಿಲೇಟರ್ಗಳಿವೆ. ಆದರೆ, ಯಾವುದೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತುರ್ತುಪರಿಸ್ಥಿತಿ ಎಂದರೆ ಯಾರು ಫೋನ್ ರಿಸೀವ್ ಮಾಡಲ್ಲ.
ಇದೊಂದು ಕೆಟ್ಟ ಪರಿಸ್ಥಿತಿಯಾಗಿದೆ. ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಈಗಾಗಲೇ ದೇವೇಗೌಡರು ಮುಖ್ಯಮಂತ್ರಿ ಸೇರಿದಂತೆ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
ಹಾಸನದಲ್ಲಿ ಈಗಾಗಲೇ ಕನಿಷ್ಠ 556 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರದಲ್ಲಿ ಜಗನ್ ಮೋಹನ ರೆಡ್ಡಿ ಮಾಡಿರುವ ರೀತಿ ನಮ್ಮ ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕನಿಷ್ಠ ಸಾವಿರ ಬೆಡ್ ನಿರ್ಮಾಣ ಮಾಡಬೇಕು.
ಜೊತೆಗೆ ಅಲ್ಲಿನ ಆಸ್ಪತ್ರೆ ವೈದ್ಯರಿಗೆ ದಾದಿಯರಿಗೆ ಹಾಗೂ ಸಿಬ್ಬಂದಿಗೆ ಅನ್ವಯವಾಗುವಂತೆ ವಿಮೆ ಮಾಡಿಸಬೇಕು. ನಮ್ಮ ಜನರನ್ನು ನಾವು ಉಳಿಸಿಕೊಳ್ಳದಿದ್ದರೆ ನಾನು ಶಾಸಕನಾಗಿ ಮತ್ತೆ ಏನು ಪ್ರಯೋಜನ? ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿರುವ ಕಲ್ಯಾಣಮಂಟಪ, ಸಮುದಾಯ ಭವನ ಸೇರಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಬಳಸಿಕೊಂಡು ಜನರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕೋವಿಡ್-19ರ ಸಂಕಷ್ಟ ಕಾಲದಲ್ಲಿ ರೈತರ ಮತ್ತು ಬಡವರ ಹಿತ ಕಾಯುವುದು ಸರ್ಕಾರದ ಕೆಲಸ. ಆದರೆ, ಸರ್ಕಾರ ಕೃಷಿಕರು ಮತ್ತು ಕೊರೊನಾ ಸೋಂಕಿಗೆ ಒಳಗಾದವರನ್ನು ಸಾಯಲಿ ಎಂದು ತೀರ್ಮಾನಿಸಿರಬೇಕೆಂದು ಅನಿಸುತ್ತಿದೆ.
ರೆಮಿಡಿಸಿವಿರ್ ಚುಚ್ಚುಮದ್ದನ್ನು ಜಿಲ್ಲೆಗೆ ತಕ್ಷಣ ಪೂರೈಕೆ ಮಾಡಬೇಕು. ನಮ್ಮ ರಾಜ್ಯದ ಬಿಜೆಪಿ ಎಂಪಿಗಳಿಗೆ ಮಾನ, ಮರ್ಯಾದೆ ಇಲ್ಲ. ಇಂಥ ಸಂಕಷ್ಟದಲ್ಲಿ ಕೇಂದ್ರದಲ್ಲಿ ನಾವು ಧ್ವನಿಯೆತ್ತಬೇಕು ಎಂಬ ಕಾಳಜಿ ಇಲ್ಲದ ನಿಷ್ಪ್ರಯೋಜಕರು. ಹೀಗಾಗಿ, ಈ ಬಿಜೆಪಿ ಸಂಸದರಿಗೆ ಆಕ್ಸಿಜನ್ ಕೊಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.