ಅರಕಲಗೂಡು(ಹಾಸನ): ತಾಲೂಕಿನ ದೊಡ್ಡಮಗ್ಗೆ ಹೋಬಳಿ ಬರಗೂರು ಗ್ರಾಮದಲ್ಲಿ ಅಂದಾಜು 25.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ವಸತಿ ಶಾಲೆ ಕಟ್ಟಡದ ಸಂಕೀರ್ಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಜಿ.ಪಂ. ಸದಸ್ಯ ರವಿ ಬರಗೂರು ಆರೋಪಿಸಿದ್ದಾರೆ.
ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಜ.15 ರಂದು ಕಟ್ಟಡ ಕಾಮಗಾರಿಗೆ ಶಾಸಕರು, ಸ್ಥಳೀಯ ಚುನಾಯಿತ ಸದಸ್ಯರು ಚಾಲನೆ ನೀಡಿದ್ದಾರೆ. ಕೇವಲ 20 ದಿನಗಳ ಅವಧಿಯಲ್ಲಿ ಇಡೀ ಕಟ್ಟಡ ತಳಪಾಯದ ಕೆಲಸ ಕಳಪೆಯಾಗಿದ್ದು, ಮಣ್ಣಿನಿಂದ ಮುಚ್ಚಲಾಗಿದೆ ಎಂದು ಕಾಮಗಾರಿ ಗುತ್ತಿಗೆ ಕಂಪನಿ ಎಂಜಿನಿಯರ್ನನ್ನು ತರಾಟೆಗೆ ತೆಗೆದುಕೊಂಡರು.
ಕಟ್ಟಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಕ್ಕಿಂತ ಕಾಂಕ್ರಿಟ್ ಬಳಸಲಾಗಿದೆ. ಕೆಲಸ ಮಾಡಿದ ಬಳಿಕ ಕನಿಷ್ಠ 21 ದಿನಗಳ ತನಕ ನೀರಿನಿಂದ ಕ್ಯೂರಿಂಗ್ ಮಾಡಬೇಕಿದ್ದು, ಈ ಕೆಲಸ ಆಗುತ್ತಿಲ್ಲ. ರಾತ್ರಿ ವೇಳೆ ಅವೈಜ್ಞಾನಿಕವಾಗಿ ಪಿಲ್ಲರ್, ಕಾಂಕ್ರಿಟ್ ಹಾಕಿ ಬೆಳಗಿನ ವೇಳೆಗೆ ಮಣ್ಣಿನಿಂದ ಮುಚ್ಚಲಾಗುತ್ತಿದೆ. ಕಾಂಕ್ರಿಟ್‌ಗೂ ಕೂಡ ಯೋಜನೆ ಪ್ರಕಾರ ಕಬ್ಬಿಣದ ರಾಡ್, ಸಿಮೆಂಟ್, ಗುಣಮಟ್ಟದ ಎಂ ಸ್ಯಾಂಡ್ ಬಳಸುತ್ತಿಲ್ಲ. ಇದರಿಂದ 14 ಇಂಚು ಅಗಲದ ಪಿಲ್ಲರ್‌ಗಳನ್ನು ಮರದ ಕಡ್ಡಿಯಿಂದ ಮೀಟಿದರೆ ಕಾಂಕ್ರಿಟ್ ಪುಡಿಯಾಗಿ ಬೀಳುತ್ತಿದೆ ಎಂದು ಅವರು ದೂರಿದರು.