ಅರಕಲಗೂಡು: ಸರ್ಕಾರಿ ಗೋದಾಮಿಗೆ ದಾಸ್ತಾನು ಮಾಡಿದ ಬೆಳೆಗಳಿಗೆ ಖರೀದಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಆಗ್ರಹಿಸಿದ್ದಾರೆ.
ಸಂಕಷ್ಟದ ನಡುವೆಯೂ ಬೆಳೆದ ರಾಗಿ, ಭತ್ತವನ್ನು ರೈತರಿಂದ ಸರ್ಕಾರ ಖರೀದಿಸಿದೆ. ಆದರೆ 3 ತಿಂಗಳಾದರೂ ಖರೀದಿಸಿದ ಬೆಳೆಯ ಹಣ ನೀಡಿಲ್ಲ. ಕೋವಿಡ್ ಇರುವುದರಿಂದ ರೈತರ ಜೀವನ ಸಂಕಷ್ಟದಲ್ಲಿದ್ದು, ತಕ್ಷಣ ಹಣ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.
ದಾಸ್ತಾನು ಮಾಡಿದ ಬೆಳೆಗಳಿಗೆ ಖರೀದಿ ಹಣ ಬಿಡುಗಡೆಗೆ ಆಗ್ರಹ ಭತ್ತಕ್ಕೆ (ಸಾಮಾನ್ಯ) ಪ್ರತಿ ಕ್ವಿಂಟಲ್ಗೆ 1,868 ರೂ, ಭತ್ತ 'ಎ' ಗ್ರೇಡ್ ಪ್ರತಿ ಕ್ವಿಂಟಲ್ಗೆ 1,888 ರೂ. ರಾಗಿ ಕ್ವಿಂಟಲ್ಗೆ 3,295 ರೂ. 31-03-2021ರ ಅಂತ್ಯಕ್ಕೆ ರಾಗಿಯನ್ನು 2,827 ಜನ ರೈತರು ನೋಂದಾಯಿಸಿದ್ದು, 2552 ರೈತರು ರಾಗಿಯನ್ನು ಬಿಟ್ಟಿರುತ್ತಾರೆ. 58,619.50.00 ಕ್ವಿಂಟಾಲ್ ಖರೀದಿಯಾಗಿದೆ. ಮತ್ತು ಭತ್ತ ,1114 ಜನ ರೈತರು ನೋದಾಯಿಸಿದ್ದು, 849 ರೈತರು 30,095.59.00 ಕ್ವಿಂಟಾಲ್ ಬಿಟ್ಟಿರುತ್ತಾರೆ ಎಂದು ಖರೀದಿ ಅಧಿಕಾರಿ ವೆಂಕಟ್ ರೆಡ್ಡಿ ಪಾಟೀಲ್ ತಿಳಿಸಿದ್ದಾರೆ.
ಲಾಭದ ಆಸೆ
ಸರ್ಕಾರ ರಾಗಿ ಪ್ರತಿ ಕ್ವಿಂಟಲ್ಗೆ 3295 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ, ಸ್ಥಳೀಯವಾಗಿ ರಾಗಿ ಪ್ರತಿ ಕ್ವಿಂಟಲ್ಗೆ 2200-2300 ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ರೈತರಿಂದ ನೇರವಾಗಿ ಖರೀದಿಸಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದರೆ ಒಂದು ಕ್ವಿಂಟಲ್ಗೆ 500 ರಿಂದ 1000 ರೂ.ವರೆಗೆ ಲಾಭ ಸಿಗಲಿದೆ. ಇದನ್ನರಿತ ಕೆಲವು ದಲ್ಲಾಳಿಗಳು ರೈತರಿಂದ ಖರೀದಿಸಿದ ರಾಗಿಗಳನ್ನು ಇಲ್ಲಿ ಅಕ್ರಮ ದಾಸ್ತಾನು ಮಾಡಿರಬಹುದಾದ ಸಾಧ್ಯತೆಯಿದ್ದು, ಬೆಂಬಲ ಬೆಲೆ ಘೋಷಣೆಯಾದ ನಂತರವೇ ಹೆಚ್ಚಿನ ದಾಸ್ತಾನು ಮಾಡಲಾಗಿದೆ ಎನ್ನಲಾಗುತ್ತಿದೆ.
ಅಕ್ರಮ ಸಾಧ್ಯತೆ
ರಾಗಿ ದಾಸ್ತಾನು ಮಾಡಿರುವವರು ರೈತರೋ ಅಥವಾ ವರ್ತಕರೋ ಎಂಬ ಬಗ್ಗೆ ಉಗ್ರಾಣ ನಿಗಮದ ವ್ಯವಸ್ಥಾಪಕರು ಮಾಹಿತಿಯನ್ನು ಸಂಗ್ರಹಿಸಿ ನೀಡಬೇಕು.
ಹಣ ಲೂಟಿ
ರೈತರಿಗೆ ಬೆಂಬಲ ಬೆಲೆ ನೀಡಿ ರಾಗಿ ಖರೀದಿ ಮಾಡುವ ಮೂಲಕ ರೈತರ ಸಹಾಯಕ್ಕಾಗಿ ಸರ್ಕಾರ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿ ಸ್ಥಳೀಯ ವ್ಯಾಪಾರಸ್ಥರು ಮತ್ತು ಕೆಲ ದಲ್ಲಾಳಿಗಳು ಪ್ರತಿ ವರ್ಷ ರೈತರಿಗೆ ಅಕ್ರಮವಾಗಿ ರಾಗಿ ಖರೀದಿಸಿ ಇತರೆ ರೈತರ ಹೆಸರಿನಲ್ಲಿ ಇವುಗಳನ್ನು ಬೆಂಬಲ ಬೆಲೆಯಲ್ಲಿ ಮಾರಿ ಹಣ ಮಾಡಿಕೊಳುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಸರ್ಕಾರದ ಹಣ ಹಿಂಬಾಗಿಲಿನಿಂದ ದಲ್ಲಾಳಿಗಳ ಮತ್ತು ದೊಡ್ಡ ವ್ಯಾಪಾರಸ್ಥರ ಕೈ ಸೇರುತ್ತಿದೆ. ಬಡ ರೈತರು ಮಾತ್ರ ಇಲ್ಲಿಯೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಹಿರಿಯ ಅಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಸೀಬಳ್ಳಿ ಯೋಗಣ್ಣ ತಿಳಿಸಿದ್ದಾರೆ.