ಹಾಸನ: ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಹೇಮಾವತಿ ಜಲಾಶಯದಿಂದ ಅಲ್ಪ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದೆ.
ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಗೊರೂರಿನ ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ ಗುರುವಾರ ಬೆಳಗ್ಗೆ 48,133 ಕ್ಯುಸೆಕ್ ಇದ್ದು, ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ 3000 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.
ಹೇಮಾವತಿ ಜಲಾಶಯದ ಗರಿಷ್ಠ ಒಳಹರಿವು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಆದ್ರೆ 23.27 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಜಲಾಶಯದಿಂದ ನೀರು ಹೊರಬಿಟ್ಟಿರುವುದರಿಂದ ತಗ್ಗು ಪ್ರದೇಶಗಳಾದ ಮರಡಿ, ಅತ್ನಿ, ಹೆಬ್ಬಾಲೆ, ಪಡುಲಿಪೆ, ಹೊಳೆನರಸೀಪುರ ಮತ್ತಿತರ ಗ್ರಾಮಗಳಿಗೆ ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದ್ದಾರೆ.
ಇನ್ನು ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಆರ್ಭಟಕ್ಕೆ ಜಿಲ್ಲೆಯ ಸಕಲೇಶಪುರ, ಆಲೂರು, ಹಾಸನ, ಬೇಲೂರು, ಅರಕಲಗೂಡು ತಾಲೂಕುಗಳಲ್ಲಿರುವ ಅಂಗನವಾಡಿ ಹಾಗು ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಇಂದು ಸಹ ರಜೆ ಘೋಷಿಸಿದ್ದಾರೆ.