ಹಾಸನ : ಹೇಮಾವತಿ ನದಿ ಪಾತ್ರದ ಪಶ್ಚಿಮಘಟ್ಟ ಹಾಗೂ ಮಲೆನಾಡು ಭಾಗದಲ್ಲಿ ವರ್ಷಧಾರೆ ಇನ್ನೂ ತಗ್ಗಿಲ್ಲ. ಹಾಸನ ಭಾಗದಲ್ಲಿ ಮಳೆ ಪ್ರಮಾಣ ಕೊಂಚ ಪ್ರಮಾಣದಲ್ಲಿ ತಗ್ಗಿದ್ದರೂ ನೆರೆ ಮಾತ್ರ ನಿಂತಿಲ್ಲ.
ತಗ್ಗದ ಪ್ರವಾಹ.. ಹೊಲ, ಗದ್ದೆಗಳೆಲ್ಲಾ ನೀರುಮಯ .. ಈಟಿವಿ ಭಾರತ ಪ್ರತಿನಿಧಿ ರಿಯಾಲಿಟಿ ಚೆಕ್! - ಹೇಮಾವತಿ ನದಿ
ಹಾಸನದಲ್ಲಿ ಪ್ರವಾಹ ಬಂದಿದ್ದರಿಂದ ಅನ್ನದಾತ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನೊಂದೆಡೆ ಬಾಳೆ ತೋಟಗಳು ಸಂಪೂರ್ಣವಾಗಿ ಮುಳುಗಿವೆ. ಅರಕಲಗೂಡು ಭಾಗದಲ್ಲಿ ಕೃಷಿ ಭೂಮಿಯಲ್ಲಿ ಆಳೆತ್ತರಕ್ಕೆ ನೀರು ತುಂಬಿಕೊಂಡಿದ್ದು, ಈ ಬಗ್ಗೆ ನಮ್ಮ ಹಾಸನ ಪ್ರತಿನಿಧಿ ಸುನಿಲ್ ಕುಂಭೇನಹಳ್ಳಿ ತೆಪ್ಪದ ಮೂಲಕ ತೆರಳಿ ರಿಯಾಲಿಟಿ ಚೆಕ್ ನಡೆಸಿದ್ದಾರೆ.
ಜಿಲ್ಲೆಯ ಕೊಣನೂರಿನ ಕಾವೇರಿ ನದಿ ಕಳೆದ ಮೂರುದಿನಗಳಿಂದ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ಹರಿಯುವಿಕೆಯಿಂದ ಕೊಣನೂರು, ಕಟ್ಟೇಪುರ, ಮಾದಾಪುರ, ರಾಮನಾಥಪುರ, ಗೊಬ್ಬಳಿ, ಲಕ್ಕೂರು, ಕೇರಳಾಪುರ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳ ಹೊಲಗದ್ದೆಗಳು ನೀರಿನಿಂದ ಜಲಾವೃತವಾಗಿವೆ. ಹೀಗಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ಇನ್ನು ಅರಕಲಗೂಡು ಭಾಗದಲ್ಲಿ ಹೆಚ್ಚಾಗಿ ತಂಬಾಕು, ಬಾಳೆ, ಅಡಿಕೆ, ಶುಂಠಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. 57 ವರ್ಷಗಳಿಂದಲೂ ಕಂಡರಿಯದ ನೆರೆ ಕಳೆದ ವರ್ಷ ಮತ್ತು ಈ ವರ್ಷ ಕಾಣಿಸಿಕೊಂಡಿದೆ. ಈಗಾಗಲೇ ಮೇ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ, ಅರಕಲಗೂಡು ಭಾಗದ ರೈತರು ತಂಬಾಕು, ಬಾಳೆ ಮತ್ತು ಶುಂಠಿ ಬೆಳೆದಿದ್ದರು. ಇದ್ದಕ್ಕಿದ್ದಂತೆ ಪ್ರವಾಹ ಎದುರಾಗಿದ್ದರಿಂದ ಎಲ್ಲಾ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬಾಳೆ ತೋಟಗಳು ಸಂಪೂರ್ಣ ಮುಳುಗಿವೆ.