ಹಾಸನ:ಹಾಲು ಉತ್ಪಾದಕರಿಗೆ ಡೈರಿ ಉದ್ಯಮಕ್ಕೆ ಮಾರಕವಾದ ಆರ್.ಸಿ.ಈ.ಪಿ ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿಯನ್ನು ಕೈ ಬಿಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.
ನಗರದ ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ 10 ಕೋಟಿಗೂ ಹೆಚ್ಚು ಹಾಲು ಉತ್ಪಾದಕರನ್ನು ಹೊಂದಿದೆ. ಇಂತಹ ನೀತಿಯಿಂದ ಉತ್ಪಾದಕರು ತೊಂದರೆಗೆ ಸಿಲುಕಲಿದ್ದಾರೆ. ಇಂತಹ ನೀತಿಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ಸದನ ಕರೆದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ನಿಯೋಗದೊಂದಿಗೆ ತೆರಳಿ ಪ್ರಧಾನಿಯವರಿಗೆ ಮನವರಿಕೆ ಮಾಡಬೇಕೆಂದರು.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಸನ ಹಾಲು ಒಕ್ಕೂಟವು 2019-20ನೇ ಸಾಲಿನ ಸೆಪ್ಟಂಬರ್ ತಿಂಗಳವರೆಗೂ ಅಂದಾಜು 10 ಕೋಟಿ ರೂ. ಲಾಭ ಗಳಿಸಿದೆ. ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ದೀಪಾವಳಿ ಉಡುಗೊರೆಯಾಗಿ ಪ್ರತಿ ಲೀಟರ್ ಹಾಲಿಗೆ 1 ರೂ. ಖರೀದಿ ದರ ಹೆಚ್ಚಿಸಲಾಗಿದೆ. ದರ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 26.50ರಷ್ಟು ದರ ಸಿಗಲಿದೆ. ಕರ್ನಾಟಕ ಹಾಲು ಮಂಡಳಿಯಲ್ಲೇ ಅತಿ ಹೆಚ್ಚಿನ ದರ ಪಾವತಿಸುತ್ತಿರುವ ಎರಡನೇ ಒಕ್ಕೂಟವಾಗಿದೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್‌ಗೆ ಅವರದೇ ಆದ ಶಕ್ತಿಯಿದೆ. ಅವರದು 30 ವರ್ಷಗಳ ರಾಜಕಾರಣ. ನಾನು ಪ್ರತಿನಿತ್ಯ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದೇನೆ. ಆದರೆ ಐಟಿ ದಾಳಿ ಬಗ್ಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದರು. ಇದೇ ವೇಳೆ ರೇವಣ್ಣ ರಾಜ್ಯದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.