ಹಾಸನ: ಪ್ರತಿ ತಿಂಗಳು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
‘ಡಿಸಿಗಳೇ ಹಳ್ಳಿ ಕಡೆ ನಡೆಯಿರಿ’ ಎಂಬ ಕಾರ್ಯಕ್ರಮವನ್ನು ಉಡುಪಿಯಿಂದಲೇ ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿ ಜತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕು. ಪೌತಿ ಖಾತೆ, ಪಹಣಿ, ಪಿಂಚಣಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಸೇರಿ ಹತ್ತು ಅಂಶಗಳ ಪಟ್ಟಿ ಮಾಡಲಾಗಿದೆ. ಉಪವಿಭಾಗಾಧಿಕಾರಿ ಸಹ ತಿಂಗಳಿಗೆ ಎರಡು ಬಾರಿ ಹಾಗೂ ತಹಶೀಲ್ದಾರ್ ಮೂರು ದಿನ ಹಳ್ಳಿಗೆ ಹೋಗಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ಜನಸ್ನೇಹಿ ಮಾಡಲು ಹಲವು ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಕೆಲಸ ನಿರ್ವಹಿಸದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ 3ನೇ ಶನಿವಾರ ನಡೆಸುವ ಕುರಿತು ಚರ್ಚೆ ನಡೆದಿದೆ. ಅಧಿಕಾರಿಗಳು ಸಂಜೆವರೆಗೂ ಹಳ್ಳಿಯಲ್ಲಿಯೇ ಇದ್ದು, ಅಲ್ಲಿನ ದಲಿತ ಕೇರಿ, ಅಂಗನವಾಡಿ ಅಥವಾ ಶಾಲೆಯಲ್ಲಿ ಬಿಸಿಯೂಟ ಮಾಡಬೇಕು. ಅಧಿಕಾರಿಗಳು ಮುಂದೆ ಯಾವ ಹಳ್ಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ಒಂದು ತಿಂಗಳು ಮುಂಚೆಯೇ ಘೋಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.