ಹಾಸನ: ರಾಜ್ಯ ಸರ್ಕಾರ ರೈತರ ಹಿತ ಕಾಯಲು ಸದಾ ಸನ್ನದ್ಧವಾಗಿದ್ದು, ಬೇಲೂರು-ಹಳೆಬೀಡು ಕೆರೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ರಣಘಟ್ಟ ಯೋಜನೆಗೆ ಶೀಘ್ರ ಅನುಮೋದನೆ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನದ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಯೋಜನೆ ಲೋಕಾರ್ಪಣೆ ಹಾಗೂ ಪುಷ್ಪಗಿರಿ ರಾಷ್ಟ್ರೀಯ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧಾರ್ಮಿಕ ಸಂಸ್ಥೆಗಳು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪುಷ್ಟಗಿರಿ ಸಂಸ್ಥಾನ ಇಲ್ಲಿನ ಜನರ ಆಗು-ಹೋಗುಗಳಿಗೆ ಧ್ವನಿಯಾಗಿದೆ. ಇಂದು ಪುಷ್ಟಗಿರಿ ಗ್ರಾಮಿಣಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡಿರುವುದು, ಮಠ ಇಲ್ಲಿಯ ಜನರ ಮೇಲಿಟ್ಟಿರುವ ಕಾಳಜಿಗೆ ಸಾಕ್ಷಿಯಾಗಿದೆ. ಸರ್ಕಾರದ ವತಿಯಿಂದ ಮೊದಲ ಕಂತಿನಲ್ಲಿ 5 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿದ ಅವರು, ಇಲ್ಲಿನ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ಯೋಜನೆಗೆ ಸದ್ಯದಲ್ಲಿ ಸದನದಲ್ಲಿ ಅನುಮೋದನೆ ನೀಡುವ ಮೂಲಕ ನೀರಾವರಿಗೆ ಆದ್ಯತೆ ನೀಡುತ್ತೇವೆ ಎಂದರು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನೀಡುವ ಮೂಲಕ ರೈತರ ಕ್ಷೇಯೋಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.
ಸಚಿವ ಮಾಧುಸ್ವಾಮಿ ಮಾತನಾಡಿ, ನಮ್ಮ ಸಂಸ್ಕೃತಿ ಕೇವಲ ಮನೆಯನ್ನ ಜೋಪಾನ ಮಾಡುವುದಲ್ಲ. ಮಠಗಳನ್ನ ಜೋಪಾನ ಮಾಡಬೇಕಾಗಿದೆ. ಕರ್ನಾಟಕದ ಶೈಕ್ಷಣಿಕ ಪ್ರಗತಿಯಲ್ಲಿ ಮಠಗಳು ಪ್ರಮುಖ ಪಾತ್ರ ವಹಿಸಿ, ಶಿಕ್ಷಣ, ದಾಸೋಹ ನೀಡಿದ್ದು, ಇದೀಗ ಶಿಕ್ಷಣದೊಂದಿಗೆ ಗ್ರಾಮಾಭಿವೃದ್ಧಿಗೂ ಮಠಗಳು ಮುಖ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪುಷ್ಟಗಿರಿ ಮಠದ ವತಿಯಿಂದ ಗ್ರಾಮಿಣಾಭಿವೃದ್ಧಿ ಯೋಜನೆಗೆ ಕೈ ಜೋಡಿಸಿರುವುದು ಎಲ್ಲಾ ಮಠಾಧೀಶರಿಗೂ ಮಾರ್ಗದರ್ಶನವಾಗಬೇಕೆಂದರು. ಈ ಭಾಗದ ಜನರ ಕುಡಿಯುವ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರು ಈಗಲೂ ನಿಮ್ಮನ್ನ ಮರೆಯುವುದಿಲ್ಲ. ಈ ಕಾರ್ಯ ಹೀಗೆ ಮುಂದುವರೆಯಲಿದೆ ಎಂದ್ರು.
ಪುಷ್ಪಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಸೋಮಶೇಖರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಮಠಕ್ಕೆ ಏನನ್ನೂ ಬಯಸುವುದಿಲ್ಲ. ಆದರೆ ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡಬೇಕೆಂದು ಮುಖ್ಯಮಂತ್ರಿಗಳ ಬಳಿ ಆಗ್ರಹಿಸುತ್ತೇವೆ. ರಾಜ್ಯ ಸರ್ಕಾರದಿಂದ ರೈತರಿಗಾಗಿ ಯಾವುದಾದರೂ ಯೋಜನೆಗಳನ್ನ ಅನುಷ್ಠಾನಗೊಳಿಸುವುದಾದರೆ, ಅದಕ್ಕೆ ಪುಷ್ಟಗಿರಿ ಗ್ರಾಮಿಣಾಭಿವೃದ್ಧಿ ಯೋಜನೆ ವತಿಯಿಂದ ಕೈ ಜೋಡಿಸಲಾಗುವುದು. ಇನ್ನೂ ಅದೇ ರೀತಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ 25 ಕೋಟಿ ರೂ. ಮೂಲ ಅನುದಾನ ನೀಡಿದ್ರೆ, ಮುಂದಿನ 10 ವರ್ಷಗಳಲ್ಲಿ ಸುತ್ತ ಮುತ್ತಲಿನ ಎಲ್ಲಾ ಕೆರೆಗಳ ಹೂಳನ್ನೆತ್ತಿ ನೀರಾವರಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ರು.