ಹಾಸನ: ಫೆ. 22ರಂದು ಐದು ಮಂದಿಯ ಮೇಲೆ ದಾಳಿ ನಡೆಸಿದ ಚಿರತೆಯನ್ನು ಆತ್ಮರಕ್ಷಣೆಗಾಗಿ ಕೊಂದು ಹಾಕಿದ್ದ ರಾಜ ಗೋಪಾಲನಿಗೆ ಕೊನೆಗೂ ಕೆಪಿಸಿಸಿ ವತಿಯಿಂದ 25 ಸಾವಿರ ರೂ.ನಗದು ಮತ್ತು ಆಧುನಿಕ ಹೊಯ್ಸಳ ಎಂಬ ಬಿರುದು ನೀಡುವ ಮೂಲಕ ಇಂದು ಆಸ್ಪತ್ರೆಯಲ್ಲಿಯೇ ಸನ್ಮಾನ ಮಾಡಲಾಯಿತು.
ರಾಜ ಗೋಪಾಲನಿಗೆ ಆಧುನಿಕ ಹೊಯ್ಸಳ ಬಿರುದು ಘಟನೆಯ ಬಳಿಕ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತನಿಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸಿಗೆ ಸೂಚನೆ ನೀಡಿದ್ದರು. ಇದರ ಮೇರೆಗೆ ಇಂದು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಅವನಿಗೆ ಮತ್ತು ಆತನ ಕುಟುಂಬ ವರ್ಗದವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸಾಂತ್ವನ ಹೇಳಿ "ಆಧುನಿಕ ಹೊಯ್ಸಳ" ಎಂಬ ಬಿರುದು ನೀಡಿ, 25,000 ಬಹುಮಾನ ಕೂಡ ಘೋಷಣೆ ಮಾಡಲಾಯಿತು.
ಓದಿ:ಅರಸೀಕೆರೆಯಲ್ಲಿ ಪ್ರಾಣ ರಕ್ಷಣೆಗಾಗಿ ಚಿರತೆಯನ್ನೇ ಕೊಂದ ವ್ಯಕ್ತಿ!
ಏನಿದು ಘಟನೆ:
ಫೆ. 22 ರಂದು ಬೆಳ್ಳಂಬೆಳಗ್ಗೆ ಚಿರತೆಯೊಂದು ತಾಯಿ ಚಂದ್ರಮ್ಮ ಮತ್ತು ಮಗ ಕಿರಣ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯ ಮಾಡಿತ್ತು. ನಂತರ ತಾಯಿ ಮಗನನ್ನು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕಡೂರಿಗೆ ಹೋಗಿದ್ದ ಅರಸೀಕೆರೆ ಮೂಲದ ರಾಜಗೋಪಾಲ ನಾಯಕಿ ಎಂಬುವರು ವಾಪಸ್ ಸ್ವಗ್ರಾಮಕ್ಕೆ ಹಿಂದಿರುಗುವಾಗ ರಸ್ತೆ ಮಧ್ಯೆ ಏಕಾಏಕಿ ದ್ವಿಚಕ್ರವಾಹನದ ಮೇಲೆ ದಾಳಿ ನಡೆಸಿತ್ತು.
ಆತ್ಮರಕ್ಷಣೆಗೆ ಕೊಲ್ಲಲೇಬೇಕಾಯಿತು:
ಈಟಿವಿ ಭಾರತದೊಂದಿಗೆ ಮಾತನಾಡಿದ ಆಧುನಿಕ ಹೊಯ್ಸಳ ರಾಜಗೋಪಾಲ್, ನಾವು ಮದುವೆ ಮುಗಿಸಿಕೊಂಡು ವಾಪಸ್ ಮನೆಗೆ ಬರುವ ಮಾರ್ಗ ಮಧ್ಯೆ ಸಂಜೆ 4ಗಂಟೆ ಸಮಯದಲ್ಲಿ, ಹೆಂಡತಿ ಮತ್ತು ಮಗಳಿಗೆ ಗಂಭೀರವಾಗಿ ಗಾಯ ಮಾಡಿತ್ತು. ನಂತರ ನನ್ನ ಕುಟುಂಬ ಮತ್ತು ನನ್ನ ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಲ್ಲಲೇ ಬೇಕಾಯ್ತು ಎಂದು ಸ್ಪಷ್ಟನೆ ನೀಡಿದರು.