ಕರ್ನಾಟಕ

karnataka

ETV Bharat / state

ಸಕಲೇಶಪುರದಲ್ಲಿ ನಿರಂತರ ಮಳೆ: ಕಾಫಿ, ಮೆಣಸು ಬೆಳೆ ಹಾನಿ - ಸಕಲೇಶಪುರ

ಸಕಲೇಶಪುರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಕಾಫಿ ಹಾಗೂ ಮೆಣಸಿಗೆ ಹಾನಿಯುಂಟಾಗಿದೆ.

coffee and pepper crop Destroy
ಸಕಲೇಶಪುರದಲ್ಲಿ ನಿರಂತರ ಮಳೆ: ಕಾಫಿ, ಮೆಣಸಿಗೆ ಹಾನಿ..

By

Published : Sep 22, 2020, 1:47 PM IST

ಸಕಲೇಶಪುರ:ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ ಹಾಗೂ ಮೆಣಸಿಗೆ ಹಾನಿಯುಂಟಾಗಿದೆ. ಜೊತೆಗೆ ವ್ಯಾಪಾರ ವ್ಯವಹಾರಗಳು ಕಡಿಮೆಯಾಗುತ್ತಿರುವುದರಿಂದ ಆರ್ಥಿಕ ಪ್ರಗತಿ ಇಳಿಮುಖವಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಸಕಲೇಶಪುರದಲ್ಲಿ ನಿರಂತರ ಮಳೆ: ಕಾಫಿ, ಮೆಣಸಿಗೆ ಹಾನಿ

ಸಾಮಾನ್ಯವಾಗಿ ತಾಲೂಕಿನಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ಭಾರೀ ಮಳೆ ಸುರಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹದವಾದ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಜೂನ್ ಹಾಗೂ ಜುಲೈ 2ನೇ ವಾರದವರಗೂ ಹೆಚ್ಚಿನ ಮಳೆ ಬಾರದ ಕಾರಣ ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿತ್ತು. ಆಗಸ್ಟ್​ ತಿಂಗಳಿನಲ್ಲಿ ವಾಡಿಕೆಯಂತೆ 455 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 1099 ಮಿ.ಮೀ. ಮಳೆ ಬಿದ್ದ ಪರಿಣಾಮ ತಾಲೂಕಿನಲ್ಲಿ ವ್ಯಾಪಕ ಬೆಳೆ ಹಾನಿ ಸಂಭವಿಸಿತ್ತು. ಸುರಿದ ಅಧಿಕ ಮಳೆಯಿಂದಾಗಿ ಕಾಫಿ, ಮೆಣಸು, ಭತ್ತದ ಬೆಳೆಗಳಿಗೆ ಹಾನಿಯುಂಟಾಗಿತ್ತು. ಇದಾದ ನಂತರ ಸೆ. 1ರಿಂದ 16ರವರೆಗೆ ವಾಡಿಕೆಯಂತೆ 96 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 171 ಮಿ.ಮೀ. ಮಳೆಯಾಗಿದ್ದು ಶೇ. 78%ಕ್ಕೂ ಅಧಿಕ ಮಳೆಯಾಗಿದೆ. ಆದರೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಮಳೆಗೆ ತಾಲೂಕಿನಲ್ಲಿ ಸಂಪೂರ್ಣವಾದ ಶೀತದ ವಾತವರಣ ಉಂಟಾಗಿತ್ತು. ಇದರಿಂದ ಕಾಫಿ, ಮೆಣಸು, ಅಡಿಕೆ ಉದುರುತ್ತಿದ್ದು, ಶೇ. 30ಕ್ಕೂ ಹೆಚ್ಚು ಬೆಳೆ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ.

ಇದರ ಜೊತೆಗೆ ಕಾಡಾನೆಗಳ ಹಾವಳಿ ಸಹ ಮಿತಿ ಮೀರಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದೆ. ಸುರಿಯುತ್ತಿರುವ ಮಳೆಯಿಂದಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಜನ ಶೀತ, ನೆಗಡಿ, ಕೆಮ್ಮು, ಜ್ವರಗಳಿಗೆ ತುತ್ತಾಗುತ್ತಿದ್ದಾರೆ. ಒಂದೆಡೆ ಕೊರೊನಾ ಹಾವಳಿ ಮತ್ತೊಂದೆಡೆ ಶೀತದ ಹಾವಳಿಯಿಂದ ಜನ ಯಾವುದು ಕೊರೊನಾ ಯಾವುದು ಶೀತ ಎಂದು ತಿಳಿಯದೆ ಆತಂಕಕ್ಕೆ ಈಡಾಗುತ್ತಿದ್ದಾರೆ. ಮಳೆಗೆ ಹೆದರಿರುವ ಜನ ಕಳೆದ ಒಂದು ವಾರದಿಂದ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದತ್ತ ಸುಳಿಯದ ಕಾರಣ ವ್ಯಾಪಾರ ವಹಿವಾಟು ಇಳಿಮುಖಗೊಂಡಿದೆ. ಕೊರೊನಾದ ಜೊತೆಗೆ ಮಳೆಯಿಂದಾಗಿ ತಾಲೂಕಿನ ಪ್ರವಾಸೋದ್ಯಮಕ್ಕೂ ತೀವ್ರ ಪೆಟ್ಟು ಬಿದ್ದಿದ್ದು, ಪ್ರವಾಸಿಗರು ಈ ಹಿಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಬರದಿರುವುದರಿಂದ ತಾಲೂಕಿನ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ.

ಸರ್ಕಾರ ಮಳೆಹಾನಿ ಪರಿಹಾರಕ್ಕೆ ಇನ್ನೂ ಯಾವುದೇ ಸಣ್ಣ ಮೊತ್ತದ ಪರಿಹಾರ ಬಿಡುಗಡೆ ಮಾಡದಿರುವುದಿರಂದ ರೈತರಿಗೆ ನಿರಾಸೆಯುಂಟಾಗಿದೆ. ನಿರಂತರ ಮಳೆಯಿಂದಾಗಿ ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ, ಅಡಿಕೆ ನಾಶಗೊಂಡಿದ್ದು, ಜೊತೆಯಲ್ಲಿ ಕಾಡಾನೆಗಳ ಕಾಟ ಜನಜೀವನವನ್ನು ಜರ್ಜರಿತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತ ಗಮನ ಹರಿಸಿ ಮಲೆನಾಡಿಗೆ ಸೂಕ್ತ ಪರಿಹಾರ ನೀಡಬೇಕು. ಅಕಾಲಿಕ ಮಳೆಯಿಂದಾಗಿ ಕಾಫಿ, ಮೆಣಸು, ಅಡಿಕೆ, ಭತ್ತದ ಬೆಳೆಗಳಿಗೆ ಹಾನಿಯುಂಟಾಗಿದ್ದು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಕಾಫಿ ಬೆಳೆಗಾರ ದೇವರಾಜ್ ಮನವಿ ಮಾಡಿದ್ದಾರೆ.

ABOUT THE AUTHOR

...view details