ಹಾಸನ:ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಇಡೀ ಜಿಲ್ಲೆ ತತ್ತರಿಸಿದೆ. ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಅಧಿಕವಾಗಿದ್ದು, ಯಗಚಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. 3.5 ಟಿಎಂಸಿ ಸಾಮರ್ಥ್ಯವನ್ನು ಹೊಂದಿರುವ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ 8 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿರುವುದರಿಂದ 5 ಗೇಟುಗಳನ್ನು ತೆರೆಯಲಾಗಿದ್ದು, ದಶಕಗಳ ಬಳಿಕ ಯಗಚಿ ಜಲಾಶಯ ತುಂಬಿ ತುಳುಕುತ್ತಿದೆ.
ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ.. ನದಿಪಾತ್ರದಲ್ಲಿರುವವರು, ಬೇಲೂರು ಪಟ್ಟಣದ ಹೊಳೆಯ ಸಮೀಪವಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಶಿರಿನ್ ತಾಜ್ ಸೂಚನೆ ನೀಡಿದ್ದು, ಇತಿಹಾಸ ಪ್ರಸಿದ್ಧ ವಿಷ್ಣುಸಮುದ್ರ ಕೆರೆ ಕೂಡ ಮೈದುಂಬಿ ಹರಿಯುತ್ತಿದೆ.
ಧರೆಗುರುಳಿದ ಮರಗಳು, ವಿದ್ಯುತ್ ಸಂಪರ್ಕ ಕಟ್ :
ಮಲೆನಾಡು ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆ ಮುಂದುವರಿದಿದೆ. ವರುಣನ ರುದ್ರನರ್ತನಕ್ಕೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದು, ಪರಿಣಾಮ ಸಕಲೇಶಪುರ ತಾಲೂಕಿನ ಹಾನುಬಾಳು, ಹೆತ್ತೂರು, ಬೆಳಗೋಡು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್, ದೂರವಾಣಿ ಹಾಗೂ ಇತರೆ ಮೂಲಸೌಕರ್ಯ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಉಕ್ಕಿ ಹರಿಯುತ್ತಿರುವ ನದಿ, ಹಳ್ಳಕೊಳ್ಳಗಳು:
ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಹೇಮಾವತಿ ನದಿ ಅಪಾಯ ಮಟ್ಟ ಮೀರಿದ್ದು, ಆಜಾದ್ ರಸ್ತೆ ಮುಳುಗಡೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಸುತ್ತಮುತ್ತಲ ಜಮೀನುಗಳಿಗೆ ನೀರು ನುಗ್ಗಿದ್ದು, ಅರಬ್ಬಿ ಸಮುದ್ರದೆಡೆಗೆ ಸಾಗುವ ಎತ್ತಿನಹೊಳೆ, ಅಡ್ಡಹೊಳೆ, ಕಿರಿ ಹೊಳೆ, ಹೊಂಗಡಹಳ್ಳ ಹೊಳೆ, ಕೆಂಪು ಹೊಳೆ, ಕಾಡುಮನೆ ಹೊಳೆ ಸೇರಿದಂತೆ ಬಹುತೇಕ ಎಲ್ಲಾ ಹಳ್ಳಕೊಳ್ಳಗಳೂ ಭೋರ್ಗರೆದು ಹರಿಯುತ್ತಿವೆ.
ಜಮೀನುಗಳಿಗೆ ನುಗ್ಗಿದ ನೀರು:
ಗ್ರಾಮೀಣ ಭಾಗದ ಕೆಲವೆಡೆ ಭತ್ತದ ಗದ್ದೆಗಳು ಸೇರಿದಂತೆ ಇತರೆ ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಕಾಫಿ, ಅಡಿಕೆ, ಮೆಣಸು ಹಾಗೂ ಇತರೆ ಬೆಳೆಗಳಿಗೆ ಕೊಳೆ ರೋಗ ತಗುಲುವ ಮತ್ತು ಶೀತದ ವಾತಾವರಣಕ್ಕೆ ಸಿಲುಕಿ ಫಸಲು ನೆಲಕಚ್ಚುವ ಆತಂಕ ಬೆಳಗಾರನ್ನು ಕಾಡುತ್ತಿದೆ.
ಮೆರಗು:
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹೇಮಾವತಿ ನದಿ, ಪಶ್ಚಿಮ ಘಟ್ಟದಲ್ಲಿ ಜಲಪಾತಗಳು ರಭಸವಾಗಿ ಧುಮ್ಮುಕ್ಕುತ್ತಿದ್ದು, ಇಲ್ಲಿನ ಪರಿಸರಕ್ಕೆ ಮೆರಗು ನೀಡಿದೆ. ಹಚ್ಚ ಹಸಿರಿನ ಬೆಟ್ಟಗುಡ್ಡಗಳು ಆಗಾಗ ಬೆಳ್ಳನೆಯ ದಟ್ಟ ಮಂಜಿನಿಂದ ಆವೃತವಾಗಿ ಕಣ್ಣಾಮುಚ್ಚಾಲೆ ಆಡುವಂತೆ ಭಾಸವಾಗುತ್ತಿದೆ. ಇಡೀ ಹಸಿರಿನ ಪರಿಸರ ನೋಡುಗರಿಗೆ ರಸದೌತಣ ನೀಡಿದಂತಾಗಿದೆ. ಒಂದೆಡೆ ಮುಂಗಾರು ಇಲ್ಲಿನ ಜನಜೀವನ ಅಸ್ತವ್ಯಸ್ತ ಗೊಳಿಸಿದೆ. ಮತ್ತೊಂದೆಡೆ ಪ್ರಕೃತಿಯ ಸಿರಿ ಸೊಬಗಿನ ವಾತಾವರಣ ಮೆರುಗು ನೀಡಿದೆ.
ಹೈ ಅಲರ್ಟ್:
ಮಳೆ ಆರ್ಭಟ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ತಲಾ ಒಬ್ಬರು ನೋಡಲ್ ಅಧಿಕಾರಿ, ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಒಳಗೊಂಡಂತೆ ತಂಡ ರಚಿಸಿದ್ದು, ಈ ತಂಡ ಮಳೆಯಿಂದಾಗುವ ಕಷ್ಟನಷ್ಟಗಳನ್ನು ಗಮನಿಸುವುದರ ಜೊತೆಗೆ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅಲ್ಲದೇ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ಇಂದು ರಜೆ ಘೋಷಣೆ ಮಾಡಿದೆ.