ಕರ್ನಾಟಕ

karnataka

ETV Bharat / state

ಹೆಚ್.ಡಿ. ರೇವಣ್ಣ ತವರಲ್ಲೇ ಈ ಸ್ಥಿತಿ... ನಿರ್ಮಾಣವಾದ 6 ತಿಂಗಳಿಗೆ ತೆಗ್ಗು ಬಿದ್ದ ರೈಲ್ವೇ ಬ್ರಿಡ್ಜ್ - Kannada news

ನಿರ್ಮಾಣವಾದ ಕೇವಲ ಆರೇ ತಿಂಗಳಿಗೆ ಬ್ರಿಡ್ಜ್ ರಸ್ತೆ ಕಿತ್ತು ದುರಸ್ಥಿಗಾಗಿ ಕಾಯುತ್ತಿದೆ. ದಿನದಿಂದ ದಿನಕ್ಕೆ ಹಾಳಾಗುತ್ತಿರುವ ಈ ಸೇತುವೆ ಮೇಲೆ ಸಂಚರಿಸಲು ವಾಹನ ಸವಾರರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಸಚಿವ ಹೆಚ್.ಡಿ.ರೇವಣ್ಣ ಅವರ ಸ್ವಕ್ಷೇತ್ರದಲ್ಲೇ ಇಂತಹ ಕಳಪೆ ಕಾಮಗಾರಿ ನಡೆದಿದೆ.

ಸೂಪರ್ ಸಿಎಂ ತವರಲ್ಲಿ ಕಳಪೆ ಕಾಮಗಾರಿ

By

Published : Jun 9, 2019, 9:48 PM IST

ಹಾಸನ : ನಿರ್ಮಾಣ ಮಾಡಿ 6 ತಿಂಗಳು ಕಳೆಯೋ ಮುನ್ನವೇ ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ತವರೂರಿನ ರೈಲ್ವೇ ಬ್ರಿಡ್ಜ್ ದುರಸ್ಥಿಗೆ ಬಂದಿದೆ.

ಹಾಸನದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣವಾದ ಕಾಲ, ಹಾಸನದ ಎನ್.ಆರ್.ವೃತ್ತದಿಂದ ಬಸ್ ನಿಲ್ದಾಣದ ಮಧ್ಯೆ ಒಂದು ರೈಲ್ವೇ ಬ್ರಿಡ್ಜ್ ಆಗಬೇಕೆಂಬ ಕೂಗು ಕೇಳಿ ಬಂದಿತ್ತು, ಆದ್ರೆ ದಶಕಗಳು ಕಳೆದ್ರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ,ಆದ್ರೆ ಹಾಸನದಿಂದ ಹೊಳೆನರಸೀಪುರಕ್ಕೆ ಸಚಿವ ರೇವಣ್ಣ ಅವರು ಪ್ರತಿನಿತ್ಯ ಸಂಚರಿಸುವ ಸಮಯದಲ್ಲಿ ಒಂದು ದಿನಅಪರೂಪಕ್ಕೆ ರೈಲ್ವೇ ಗೇಟ್​ ಹಾಕಿ 5 ರಿಂದ10 ನಿಮಿಷ ಕಾಯಬೇಕಾದ ಸನ್ನಿವೇಶ ಎದುರಾಗಿತ್ತು.

ಆಗ ಅಲ್ಲಿನ ಪರಿಸ್ಥಿತಿ ಅರ್ಥವಾದ ಹಿನ್ನೆಲೆಯಲ್ಲಿ, ಅಂದೇ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಂಗರಹಳ್ಳಿಗೆ ಸಚಿವ ಹೆಚ್.ಡಿ.ರೇವಣ್ಣ ರೈಲ್ವೇ ಬ್ರಿಡ್ಜ್ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆಮೆಗತಿಯಲ್ಲಿ ವರ್ಷಾನು ವರ್ಷ ನಡೆದ ಹಂಗರಹಳ್ಳಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿತು.

ಸೂಪರ್ ಸಿಎಂ ತವರಲ್ಲಿ ಕಳಪೆ ಕಾಮಗಾರಿ

ಕಳೆದ 6 ತಿಂಗಳ ಹಿಂದಷ್ಟೇ ತರಾತುರಿಯಲ್ಲಿ ಜನರ ಬಳಕೆಗೆ ಮುಕ್ತವಾಯ್ತು, ಇನ್ನೂ ಈ ಮದ್ಯೆ ನಿರ್ಮಾಣವಾದ ಹಂತದಲ್ಲೇ 2-3 ಭಾರಿ ಬ್ರಿಡ್ಜ್ ನ ಒಂದು ಭಾಗ ಬಿದ್ದು ಹೋಗಿತ್ತು, ಅಂದೇ ಈ ಕಾಮಗಾರಿಯ ಗುಣಮಟ್ಟದ ಅಸಲೀಯತೆ ಬಯಲಾಗಿತ್ತಾದ್ರೂ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು ನಾವೇ ಗುಣಮಟ್ಟ ಚೆಕ್ ಮಾಡೋಕೆ ಬ್ರಿಡ್ಜ್ ಆಯ್ದ ಭಾಗವನ್ನು ಕಿತ್ತು ಪರಿಶೀಲಿಸಿದ್ವು ಅಂತ ನಂಬಲಾಗದ ಕಥೆ ಹೇಳಿ ತ್ಯಾಪೆ ಹಾಕಿದರು.

ಆದರೀಗ ನಿರ್ಮಾಣವಾದ ಕೇವಲ ಆರೇ ತಿಂಗಳಿಗೆ ಬ್ರಿಡ್ಜ್ ರಸ್ತೆ ಕಿತ್ತು ದುರಸ್ಥಿಗಾಗಿ ಕಾಯುತ್ತಿದ್ದು, ಮಳೆ ಬಿದ್ದ ಸಂದರ್ಭದಲ್ಲಿ ನೀರು ತುಂಬಿಕೊಂಡು ಹಲವು ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ. ದಿನದಿಂದ ದಿನಕ್ಕೆ ಹಾಳಾಗುತ್ತಿರುವ ಈ ಸೇತುವೆ ಮೇಲೆ ಸಂಚರಿಸಲು ವಾಹನ ಸವಾರರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಸಚಿವ ಹೆಚ್.ಡಿ.ರೇವಣ್ಣ ಅವರ ಸ್ವಕ್ಷೇತ್ರದಲ್ಲೇ ಇಂತಹಾ ಕಳಪೆ ಕಾಮಗಾರಿ ನಡೆದಿದೆ ಅಂದ್ರೆ ಇನ್ನೂ ಜಿಲ್ಲೆಯಾದ್ಯಂತ ಕೋಟ್ಯಾಂತರ ರೂ.ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಅವುಗಳ ಗುಣಮಟ್ಟದ ಕುರಿತು ಅನುಮಾನ ಹುಟ್ಟಿಸುವಂತೆ ಮಾಡಿದೆ.

ಇನ್ನೊಂದೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಲಿದ್ದು, ನಡೆಯಬಹುದಾದ ಅವಘಡಗಳನ್ನ ತಪ್ಪಿಸುವ ನಿಟ್ಟಿನಲ್ಲಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಸೇತುವೆ ರಸ್ತೆ ದುರಸ್ಥಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details