ಹಾಸನ: ಶಿಲಾಯುಗವಾಯ್ತು, ಸುವರ್ಣ ಯುಗವಾಯ್ತು ಈಗ ಭ್ರಷ್ಟಾಚಾರ ಯುಗವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೆಳನಾಧ್ಯಕ್ಷ ಡಾ. ಆರ್. ಓಬಳೇಶ ಘಟ್ಟಿ ಆತಂಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಹಾಸನ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾರ್ಥಕ್ಕಾಗಿ, ಯಾರದ್ದೋ ಹಿತಾಸಕ್ತಿಗಾಗಿ, ಸಾಹಿತ್ಯವಾಗಬಾರದು. ನಾವೆಲ್ಲಾ ಒಂದಲ್ಲ ಒಂದು ದಿನ ಇಲ್ಲಿಂದ ಶಾಶ್ವತವಾಗಿ ನಿರ್ಗಮಿಸುವವರೆ. ಆದರೆ ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಕೊಡಬೇಕಾಗುತ್ತದೆ. ಒಳ್ಳೆಯದನ್ನು ಉಳಿಸಿ ಹೋಗಬೇಕಾಗುತ್ತದೆ.
ಸಾಹಿತಿಗಳು ಮತ್ತು ಸಾಹಿತ್ಯ ಸಂಘಟಕರ ಬಗ್ಗೆ ತೀವ್ರವಾಗಿ ಮಾತನಾಡುವ ಕಾಲ ಬಂದು ಬಿಟ್ಟಿದೆ. ಸಾಹಿತ್ಯ ಮತ್ತು ಶಿಕ್ಷಣ ಕಲುಷಿತವಾದರೆ ನಮ್ಮ ಜೀವನ ಆಯೋಮಯವಾದೀತು. ಹೀಗಾಗಿ ನಾವುಗಳು ಎಚ್ಚರಿಕೆಯಿಂದ ಸಾಗಬೇಕಾಗಿದೆ. ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ ವಿಚಾರ ಮತ್ತು ವಿವೇಕಯುತ ಶಿಕ್ಷಣ ನೀಡಬೇಕು. ತಂತ್ರಜ್ಞಾನದ ಯುಗದಲ್ಲಿ ಮಾನವೀಯತೆ ದೂರವಿಟ್ಟು ಸ್ವಾರ್ಥ ಜೀವನಕ್ಕೆ ಮೊರೆ ಹೋಗುತ್ತಿದ್ದೇವೆ. ವಿದ್ಯೆ, ವಿವೇಕ ಮತ್ತು ಪ್ರಾಮಾಣಿಕತೆಗೆ ಬೆಲೆಯಿಲ್ಲದೆ ಪರಿತಪಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಮುಂಚೂಣಿಗೆ ಬರಬೇಕು. ಸಾಹಿತ್ಯ, ಶಿಕ್ಷಣ ದುರ್ಬಲವಾದರೆ ಸಾಮಾಜಿಕ ಸ್ವಾಸ್ಥ್ಯ ಅಯೋಮಯವಾಗಲಿದೆ ಎಂದು ಎಚ್ಚರಿಸಿದರು.