ಬೇಲೂರು (ಹಾಸನ): ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು. ಸಂಪ್ರದಾಯದಂತೆ ಈ ವರ್ಷವೂ ತೇರು ಕದಲುವ ಮೊದಲು ಕುರಾನ್ ಪಠಿಸಲು ಮುಜರಾಯಿ ಇಲಾಖೆಯು ಅವಕಾಶ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು.
ಕುರಾನ್ ಪಠಣಕ್ಕೆ ಅವಕಾಶ ನೀಡುವ ಬಗ್ಗೆ ಸೂಕ್ತ ನಿರ್ದೇಶನ ಕೋರಿ ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಅವರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಏ.12ರಂದು ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಆಯುಕ್ತರಾದ ರೋಹಿಣಿ ಸಿಂಧೂರಿ ಇಲಾಖೆಯ ನಿರ್ದೇಶನ ಪತ್ರ ಕಳುಹಿಸಿದ್ದಾರೆ.
ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಕುರಾನ್ ಪಠಣ.. ಹಿಂದೂ ಧಾರ್ಮಿಕ ಕಾಯ್ದೆ 2002ರ ಸೆಕ್ಷನ್ 58ರ ಪ್ರಕಾರ ದೇಗುಲದ ಧಾರ್ಮಿಕ ಆಚರಣೆ, ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡತ್ತಕ್ಕದ್ದಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ, ಕುರಾನ್ ಪಠಣ ಸಂಪ್ರದಾಯ ಮುಂದುವರಿಸಲು ದೇಗುಲ ಸಮಿತಿ ನಿರ್ಧರಿಸಿತು. ಬೆಳಗ್ಗೆ 10:40ಕ್ಕೆ ನಡೆದ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ವಾಡಿಕೆಯಂತೆ ಖಾಜಿ ಸಾಬ್ ಕುರಾನ್ ಪಠಿಸಿದರು.
ಎರಡು ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವವನ್ನ ಕಲ್ತುಂಬಿಕೊಳ್ಳಲು ಸಾವಿರಾರು ಜನರು ಬೇಲೂರಿಗೆ ಬಂದಿದ್ದಾರೆ. ಶ್ರೀ ವೈಷ್ಣವ ಸಂಪ್ರದಾಯದ ಪಾಂಚರಾತ್ರ ಆಗಮ ಪದ್ಧತಿಗಳಿಗೆ ಅನುಗುಣವಾಗಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಈ ಮೊದಲು ಕುರಾನ್ ಪಠಣಕ್ಕೆ ವ್ಯಕ್ತವಾದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ್ದ ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ, ಇದು ನಮ್ಮ ಕೈಪಿಡಿಯಲ್ಲಿಯೇ ಇದೆ. ಪ್ರತಿ ವರ್ಷದ ಸಂಪ್ರದಾಯವಿದು. ಈ ವರ್ಷ ಚರ್ಚೆಗೆ ಒಳಪಟ್ಟಿದೆ. ಹೀಗಾಗಿ, ಆಯುಕ್ತರ ನಿರ್ದೇಶನ ಕೋರಿದ್ದೇವೆ ಎಂದಿದ್ದರು.
ಜಾತ್ರೆಯಲ್ಲಿ ಮುಸ್ಲಿಮರಿಗೆ ಮಳಿಗೆ ಹಾಕಲು ಅವಕಾಶ ಕೊಡುವ ಬಗ್ಗೆಯೂ ಇತ್ತೀಚೆಗೆ ವ್ಯಾಪಕ ಚರ್ಚೆಗಳು ನಡೆದಿದ್ದವು. ಹಿಂದುತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದವು. ದೇಗುಲ ಪರಿಸರದಲ್ಲಿ ಟೆಂಡರ್ ಹಾಕುವ ಹಕ್ಕನ್ನು ಸಿದ್ದೇಶ್ ಎನ್ನುವರು ಪಡೆದಿದ್ದಾರೆ. ಪುರಸಭೆ ಟೆಂಡರ್ ಕರೆದಿದ್ದು, ಇದು ಮುಜರಾಯಿ ಇಲಾಖೆಗೆ ಸಂಬಂಧಿಸಿಲ್ಲ. 15 ಮುಸ್ಲಿಂ ಕುಟುಂಬಗಳು ಮಳಿಗೆಗೆ ಅವಕಾಶ ಪಡೆದಿವೆ ಎಂದು ಟೆಂಡರ್‌ದಾರರು ತಿಳಿಸಿದ್ದರು.
ಇದನ್ನೂ ಓದಿ:ನೀರಾವರಿ ಯೋಜನೆಗಾಗಿ SR ಪಾಟೀಲ್ ಸಂಕಲ್ಪ ಯಾತ್ರೆ : ಬಾದಾಮಿಯಲ್ಲಿ ಅದ್ಧೂರಿ ಸ್ವಾಗತ
ಈ ಬಾರಿಯ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫೋಟೋ ಹಾಗೂ ಕನ್ನಡ ಬಾವುಟ ಹಿಡಿದಿದ್ದ ಅಭಿಮಾನಿಗಳು ಅಪ್ಪು.. ಅಪ್ಪು ... ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಹಿಜಾಬ್ ನಂತರದ ಬೆಳವಣಿಗೆಯ ನಡುವೆ ಕುರಾನ್ ಪಠಿಸದಂತೆ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ ಅಂತಾ ಸರ್ಕಾರದ ಮುಜರಾಯಿ ಆಯುಕ್ತೆ ರೋಹಿನಿ ಸಿಂಧೂರಿ ತಿಳಿಸಿದ್ದರಿಂದ ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.