ಹಾಸನ: ಯಾವುದೇ ಉದ್ಯಮಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಲಾಭಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ನಗರದ ಹೋಟೆಲ್ ಜ್ಯುವೆಲ್ ರಾಕ್‍ನಲ್ಲಿ ಬೆಂಗಳೂರು ಹಾಗೂ ಮೈಸೂರು ಶಾಖೆಯ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಕರ್ನಾಟಕ ಸರ್ಕಾರ ರಫ್ತು ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಭಾವಿ ರಫ್ತುದಾರರಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ರಫ್ತು ಮಾಡುವುದಕ್ಕಿಂತ ಆಮದು ಮಾಡಿಕೊಳ್ಳುವ ಪ್ರಮಾಣವೇ ಹೆಚ್ಚಾಗಿದೆ. ಕೇವಲ ದೊಡ್ಡ ಉದ್ಯಮಗಳೇ ಉತ್ಪನ್ನಗಳನ್ನು ರಫ್ತು ಮಾಡಬೇಕೆನ್ನುವ ನಿಯಮವಿಲ್ಲ, ಸಣ್ಣ ಉದ್ದಿಮೆದಾರರೂ ಕೂಡ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡಬಹುದಾಗಿದೆ ಎಂದರು.