ಹಾಸನ : ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹಿಂದೆ ಬೀಳಬಾರದೆಂಬ ಉದ್ದೇಶದೊಂದಿಗೆ ಪಟ್ಟಣದಲ್ಲಿರುವ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುತ್ತಿರುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಚನ್ನರಾಯಪಟ್ಟಣದಲ್ಲಿನ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕಂಪ್ಯೂಟರ್ ಕೊಠಡಿ, ಪೋಷಕರ ಸಭೆ ಮತ್ತು ನಾನಾ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಉತ್ತಮ ಕಲಿಕೆಯ ದೃಷ್ಠಿಯಿಂದ 4 ಸ್ಮಾರ್ಟ್ ಕ್ಲಾಸ್ ಮತ್ತು 25 ಕಂಪ್ಯೂಟರ್ ಹೊಂದಿರುವ ಕೊಠಡಿಗೆ 8 ಲಕ್ಷ ರೂ. ವೆಚ್ಚದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 600 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಕೊರತೆಯಿದ್ದ ಶೌಚಾಲಯವನ್ನು ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 10 ಲಕ್ಷ ಹಣ ಮಂಜೂರಾಗಿದ್ದು, ಮುಂದಿನ ತಿಂಗಳು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕಡ್ಡಾಯವಾಗಿ ಪೋಷಕರ ಸಭೆ ಕರೆಯುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಖಾಸಗಿ ಶಾಲೆಗಳಂತೆ ಪ್ರತಿ 15ದಿನಕ್ಕೊಮ್ಮೆ ವಿಷಯವಾರು ಟೆಸ್ಟ್ ನಡೆಸುವಂತೆ ತಿಳಿಸಲಾಗಿದ್ದು, ಶೈಕ್ಷಣಿಕ ಹಿತದೃಷ್ಠಿಯಿಂದ ತಾಲೂಕಿನೆಲ್ಲೆಡೆ 35 ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜು ಕಟ್ಟಡಗಳನ್ನು ಕಟ್ಟುತ್ತಿರುವುದಾಗಿ ಹೇಳಿದರು.
ಜಿ.ಪ.ಸದಸ್ಯ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿ, ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಅವಶ್ಯಕವಾಗಿದ್ದು, ಜ್ಞಾನ ಮತ್ತು ಬೋಧನಾ ಗುಣಮಟ್ಟ ಹಚ್ಚಿಸುವಲ್ಲಿ ಇಲ್ಲಿನ ಸ್ಮಾರ್ಟ್ ಕ್ಲಾಸ್‌ಗಳು ನೆರವಾಗಿವೆ. ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯ, ಗುಣಮಟ್ಟವನ್ನು ಸರ್ಕಾರಿ ಶಾಲೆಯೊಂದು ಅಳವಡಿಸಿಕೊಂಡು ಅತ್ಯುತ್ತಮ ಫಲಿತಾಂಶ ದಾಖಲು ಮಾಡಿರುವ ಶಾಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಖಾಸಗಿ ಶಾಲೆಯಲ್ಲಿ ಓದಿದರೇ ಮಾತ್ರ ಉನ್ನತ ವ್ಯಾಸಾಂಗ ಮಾಡಬಹುದು, ನೌಕರಿ ಪಡೆಯಬಹುದು ಎಂಬ ತಪ್ಪು ಗ್ರಹಿಕೆಯಿಂದ ಪೋಷಕರು ಹೊರಬರಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಸಾಧನೆ ಮಾಡಿದ ನಿದರ್ಶನಗಳಿರುವುದು, ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತವಾಗಿಸದೇ ಅವರಲ್ಲಿ ಮೌಲ್ಯಗಳನ್ನು ತುಂಬಬೇಕೆಂದರು.