ಅರಸೀಕೆರೆ(ಹಾಸನ):90 ವರ್ಷದ ಹಿರಿಯ ರಾಜಕಾರಣಿಯಾದ ನಾನು ಸತ್ಯವನ್ನೇ ಹೇಳುತ್ತೇನೆ. ಇಡೀ ಜೆಡಿಎಸ್ ಪಕ್ಷವನ್ನು ತುಳಿಯುತ್ತೇನೆ ಎನ್ನುವ ಸ್ಥಳೀಯ ಶಾಸಕ ಕೆ ಎಂ ಶಿವಲಿಂಗೇಗೌಡರ ರಾಜಕೀಯಕ್ಕೆ ಅಂತ್ಯ ಹಾಡಿ ಎಂದು ಕ್ಷೇತ್ರದ ಮತದಾರರಿಗೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕರೆ ನೀಡಿದರು.
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್. ಆರ್. ಸಂತೋಷ್ ಪರ ಗಂಡಸಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಮತ್ತು ದಳಪತಿಗಳು ಅಬ್ಬರದ ಪ್ರಚಾರ ಕೈಗೊಳ್ಳುವ ಮೂಲಕ ಶಿವಲಿಂಗೇಗೌಡರ ವಿರುದ್ಧ ಗುಡುಗಿದರು.
ಗಂಡಸಿ ಚೆಕ್ ಪೋಸ್ಟ್ ವೃತ್ತದಲ್ಲಿ ಜಮಾಯಿಸಿದ್ದ ಆಪಾರ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಅವರು, ಬೊಮ್ಮಸಂದ್ರ, ಶಶಿವಾಳ, ಡಿ.ಎಂ. ಕುರ್ಕೆ ಗ್ರಾಮಗಳು ಸೇರಿದಂತೆ 40ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದು ನಮ್ಮ ಜೆಡಿಎಸ್ ಪಕ್ಷ ಎಂದು ಮತದಾರರಿಗೆ ಹೇಳಿದರು.
ತಾಯಿ ಭುವನೇಶ್ವರಿ ಮಕ್ಕಳಾದ ನಾವು ನುಡಿದಂತೆ ನಡೆಯುವ ಮಕ್ಕಳಾಗಿದ್ದೇವೆ. ಮೋಸವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಬಣ್ಣ ಬಯಲು ಮಾಡಿ, ಅವರ ಕುತಂತ್ರದ ರಾಜಕೀಯ ಆಟ ಮತ್ತು ಒಡೆದಾಳುವ ನೀತಿ ಕೂಡ ಕೊನೆಯಾಗಬೇಕು. ತೆಂಗು ಬೆಳೆಗಾರರ ಪರಿಹಾರಕ್ಕಾಗಿ ನಡೆದ ನಾಟಕೀಯ ಹೋರಾಟವನ್ನು ನಂಬಿ 180 ಕೋಟಿ ರೂಪಾಯಿ ಪರಿಹಾರ ಹಣ ತೆಂಗು ಬೆಳೆ ಹಾನಿಗೆ ನೀಡಿದ್ದೆವು ಎಂಬುದನ್ನು ಈ ಕ್ಷೇತ್ರದ ಜನತೆ ಮರೆಯಬಾರದು ಎಂದು ದೇವೇಗೌಡರು ಹೇಳಿದ್ರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಈ ರಾಜ್ಯದಲ್ಲಿ ಜನತೆ ಮುಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಎಂದು ತೀರ್ಮಾನ ಮಾಡಿದ್ದಾರೆ. ಮೇ 18 ಅಧಿಕಾರ ಸ್ವೀಕಾರ ಮಾಡುವುದು ಶತಸಿದ್ದ. ಸ್ಥಳೀಯ ಶಾಸಕ ಕೆ.ಎಂ ಶಿವಲಿಂಗೇಗೌಡರಿಗೆ ಇದುವರೆಗೂ ದೇವೇಗೌಡರ ಮೇಲೆ ಪ್ರೀತಿ ಇತ್ತು. ಈಗ ಸೋನಿಯಾ ಗಾಂಧಿ ಮೇಲೆ ಪ್ರೀತಿ ಹುಟ್ಟಿದೆ ಎಂದು ಶಿವಲಿಂಗೇಗೌಡರ ವಿರುದ್ಧ ಕುಟುಕಿದರು.
ಅರಸೀಕೆರೆ ಕ್ಷೇತ್ರದಲ್ಲಿ ಹಾನುಗವಾಳು ನಂಜಪ್ಪ ಸೇರಿದಂತೆ ಅನೇಕರ ಚುನಾವಣೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಮ್ಮ ಪಕ್ಷವು ಜಾತಿಗಳಿಗೆ ಮಾನ್ಯತೆ ನೀಡುವುದಿಲ್ಲ. ನಮ್ಮ ಪಕ್ಷವು ಹಿಂದೆಯೂ, ಇಂದು ಮತ್ತು ಮುಂದೆಯೂ ಜಾತ್ಯತೀತ ಪಕ್ಷವಾಗಿದೆ. ನೀರು ನೀಡಿದ ಭಗೀರಥ ಎಂಬ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪುತ್ಥಳಿ ಸ್ಥಾಪಿಸಲಾಗಿದೆ ಎಂದು ಶ್ಲಾಘಿಸಿದರು.
ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಮಾತನಾಡಿ, ಅರಸೀಕೆರೆ ಕ್ಷೇತ್ರಕ್ಕೆ ಎನ್ ಆರ್ ಸಂತೋಷ ಅವರನ್ನು ಅಭ್ಯರ್ಥಿಯಾಗಿ ಮಾಡಿದೆವು. ಕೊನೆ ಗಳಿಗೆಯಲ್ಲಿ ಪಕ್ಷಕ್ಕೆ ಬಂದು ಸೇರ್ಪಡೆಯಾದರು. ಪಕ್ಷದ ಸಿದ್ಧಾಂತ ಒಪ್ಪಿಕೊಂಡು, ಇವತ್ತು ದೇವೇಗೌಡ ಅಪ್ಪಾಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆಂದು, ಕುಮಾರಣ್ಣನಿಗೆ ಹೆಗಲಿಗೆ ಹೆಗಲು ಕೊಡ್ತಿವಿ ಎಂದು ಹೇಳಿ ಸಂತೋಷ ಅವರು ನಮ್ಮ ಪಾರ್ಟಿಗೆ ಬಂದರು.
ಆದರೆ ಇಲ್ಲಿನ ಶಾಸಕರು ನಡೆದುಕೊಂಡ ರೀತಿ, ಜೆಡಿಎಸ್ ಪಕ್ಷ ಹಾಗೂ ನಾಯಕರನ್ನು ಕಡೆಗಣಿಸಿ ಆವರು ಆಡಿದ ಮಾತುಗಳನ್ನು ನೋಡಿದಿರಿ. ಗಂಡಸಿ ಮತದಾರರು ದೇವೇಗೌಡರ ಕುಮಾರಣ್ಣ ನೋಡಿ ವೋಟ ಹಾಕಲ್ಲ ಅಂದ್ರೂ, ಇಂದು ಇಷ್ಟೆಲ್ಲಾ ಜನ ಬಂದಿದ್ದೀರಿ. ಯಾರನ್ನು ನೋಡಿ ಬಂದಿದ್ದೀರಿ ಎಂದು ಮತದಾರರ ಎದುರು ಶಾಸಕ ಕೆ ಎಂ ಶಿವಲಿಂಗೇಗೌಡರಿಗೆ ತಿರುಗೇಟು ನೀಡಿದ್ರು.
ಇದನ್ನೂಓದಿ:ಹನುಮಾನ್ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ, ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನ: ಡಿ ಕೆ ಶಿವಕುಮಾರ್ ಘೋಷಣೆ