ಹಾಸನ :ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಕೇಂದ್ರ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ಕೇವಲ ತಾತ್ಕಾಲಿಕ ಪರಿಹಾರ ಕೊಡುವುದೇ ಮುಖ್ಯವಾಗಬಾರದು. ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಬೆಳೆಹಾನಿಯಾಗಿದ್ದು, ಆಸ್ತಿಪಾಸ್ತಿಗಳು ನಷ್ಟವಾಗಿವೆ. ಸರ್ಕಾರ ಹೆಸರಿಗೆ ಮಾತ್ರ 2000 ರೂ. ಪರಿಹಾರ ಕೊಟ್ಟರೆ ಅನುಕೂಲವಾಗುವುದಿಲ್ಲ. ಬೆಳೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕು. ಜಿಲ್ಲಾಧಿಕಾರಿ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಶಕ್ತಿಮೀರಿ ಕೆಲಸ ಮಾಡಿ ಸಂತ್ರಸ್ತರಿಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದರು.
ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆಯಾಗುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಸಚಿವರನ್ನು ಜಿಲ್ಲೆಗೆ ಕಳುಹಿಸಿ ಪ್ರವಾಹ ಹಾನಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಆದ್ದರಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಆದಷ್ಟುಬೇಗ ಪರಿಹಾರ ನೀಡಿದರೆ ಅನುಕೂಲವಾಗಲಿದೆ. ಜಿಲ್ಲೆಯ ಸಕಲೇಶಪುರ, ಬೇಲೂರು, ಅರಕಲಗೂಡು ತಾಲೂಕುಗಳಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಪರಿಹಾರ ನೀಡಲು ಮುಂದಾಗಿದೆ ಎಂದರು.