ಸಕಲೇಶಪುರ(ಹಾಸನ) :ಪಟ್ಟಣದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಶಾಸಕರ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾನೂನು ವಿಭಾಗದ ಸಂಚಾಲಕ ವಕೀಲ ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.
ಕಸ ವಿಲೇವಾರಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಶಾಸಕರ ಮನೆ ಮುಂದೆ ಕಸ ಸುರಿದು ಧರಣಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಕಸ ವಿಲೇವಾರಿ ಸಮಸ್ಯೆ ಅತ್ಯಂತ ಗಂಭೀರ ಸಮಸ್ಯೆ. ಜನಪ್ರತಿನಿಧಿಗಳು ಹಾಗೂ ಪುರಸಭಾ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಒಂದು ವಾರದಿಂದ ಕಸ ವಿಲೇವಾರಿಯಾಗದೆ, ಪಟ್ಟಣ ಗಬ್ಬುನಾರುತ್ತಿದೆ. ಮಾಸ್ಕ್ ಧರಿಸದಿದ್ದಲ್ಲಿ ₹100 ದಂಡ ವಿಧಿಸುವ ಪುರಸಭೆಯವರು, ಕಸದ ವಿಲೇವಾರಿ ಸಮಸ್ಯೆ ಮಾತ್ರ ಬಗೆಹರಿಸಲು ಮುಂದಾಗುತ್ತಿಲ್ಲ.
ಈ ಹಿಂದೆ ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಸುಭಾಷ್ ಮೈದಾನದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮಳಲಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಇದು ಸಂಪೂರ್ಣ ಪಾಳು ಬಿದ್ದಿದೆ. ಕೂಡಲೇ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಭೆ ಕರೆದು ಹೋರಾಟಕ್ಕೆ ಮುನ್ನುಡಿ ಇಡಲಾಗುತ್ತದೆ. ಈ ತಿಂಗಳ 30ರೊಳಗೆ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಸೂಕ್ತ ಸೂಕ್ತ ಕ್ರಮಕೈಗೊಳ್ಳದಿದ್ರೆ, ಬರುವ ಗಾಂಧಿ ಜಯಂತಿಯಂದು ಶಾಸಕರ ಮನೆ ಮುಂದೆ ಕಸ ಸುರಿದು ವಿನೂತ ಪ್ರತಿಭಟನೆ ಮಾಡಲಾಗುವುದು ಎಂದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಜೀವನ್ ಹಲಸುಲಿಗೆ ಮಾತನಾಡಿ, ಕಳೆದ 12 ವರ್ಷಗಳಿಂದ ಶಾಸಕರಾಗಿರುವ ಹೆಚ್ ಕೆ ಕುಮಾರಸ್ವಾಮಿಯವರು ಈ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಮುಂದಾಗಿಲ್ಲ. ಕೂಡಲೇ ಶಾಸಕರು ಈ ಸಮಸ್ಯೆ ಬಗೆಹರಿಸಲು ಮುಂದಾಗದಿದ್ದಲ್ಲಿ ಸಂಘಟನೆ ವತಿಯಿಂದ ನಿರಂತರ ಹೋರಾಟ ಮಾಡಲಾಗುತ್ತದೆ ಎಂದರು.