ಹಾಸನ (ಅರಸೀಕೆರೆ): ಉಪನೋಂದಣಿ ಕಚೇರಿಯಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುತ್ತಾರೆ ಇಲ್ಲದಿದ್ದರೆ ರಾತ್ರಿ 8 ಗಂಟೆ ಆದರೂ ಕೂಡ ಕಚೇರಿಯ ಮುಂಭಾಗದಲ್ಲಿ ಕಾಯಿಸುತ್ತಾರೆ ಎಂದು ಆರೋಪಿಸಿ ಕೆಲ ಬಿಜೆಪಿಯ ಮುಖಂಡರು ಕಚೇರಿ ಆವರಣದಲ್ಲಿಯೇ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಕೆಲವು ದಾಖಲಾತಿಗಳನ್ನು ನೋಂದಣಿ ಮಾಡಿಸಲು ಸರ್ಕಾರಿ ಶುಲ್ಕ ನಿಗದಿ ಮಾಡಿದ್ದರೂ, ಅದನ್ನು ಹೊರತುಪಡಿಸಿ ಸರ್ಕಾರಿ ಶುಲ್ಕದ ಎರಡರಷ್ಟು ಹಣವನ್ನು ಲಂಚ ರೂಪದಲ್ಲಿ ಕೊಡಬೇಕು. ಇಲ್ಲದಿದ್ದರೆ ದಾಖಲಾತಿಗಳ ಗಣಕೀಕರಣ ಆಗುವುದೇ ಇಲ್ಲ. ಸರ್ಕಾರಿ ಶುಲ್ಕ ಮಾತ್ರ ಪಾವತಿಸಿದರೆ ಸ್ಕ್ಯಾನರ್ ಹಾಳಾಗಿದೆ, ಪ್ರಿಂಟರ್ ಕೆಟ್ಟುಹೋಗಿದೆ, ಕೆಲಸ ನಿರ್ವಹಿಸುತ್ತಿಲ್ಲ ಎಂಬ ನಾನಾ ಕಾರಣಗಳನ್ನು ಹೇಳಿ ದಿನಗಳನ್ನು ದೂಡುತ್ತರೆ ಎಂಬ ಆರೋಪವಿದೆ.
ಅದೇ ಕೈತುಂಬಾ ಹಣ ಕೊಟ್ಟರೆ ಕೇವಲ ಅರ್ಧಗಂಟೆಯಲ್ಲಿ ಕೆಟ್ಟು ಹೋಗಿರುವ ವಸ್ತುಗಳೆಲ್ಲವೂ ರಿಪೇರಿಯಾಗಿ ಬಿಡುತ್ತಾವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಉಪನೋಂದಣಿ ಕಚೇರಿಯಲ್ಲಿ ಪ್ರತಿಭಟನೆ ಸರ್ಕಾರಿ ಶುಲ್ಕ ಪಾವತಿ ಮಾಡಲು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅನಧಿಕೃತವಾಗಿ ಕೆಲವರನ್ನ ನೇಮಿಸಿಕೊಂಡಿದ್ದು, ಅವರ ಬಳಿ ಹಣ ಕೊಡಬೇಕಂತೆ. ನಾನು ಈಗಾಗಲೇ ಸರ್ಕಾರದ ನಿಯಮ ಪ್ರಕಾರ 12 ಸಾವಿರ ನೀಡಿದ್ದು, ಇದಲ್ಲದೆ 19 ಸಾವಿರ ಹೆಚ್ಚುವರಿಯಾಗಿ ಕೊಡಬೇಕು ಎಂದು ಕೇಳಿದ್ದಾರೆ. ಹೀಗಾಗಿ ನಾನು ಬೆಳಗ್ಗೆಯಿಂದ ಹಣ ಕೊಟ್ಟು ಕಾಯುತ್ತಿದ್ದೇನೆ ಎಂಬುದು ಅಲ್ಲಿನ ಸಾರ್ವಜನಿಕರ ಒಬ್ಬರ ಮಾತಾಡಿದರೆ, ಇನ್ನು ಸರ್ಕಾರಿ ಹಣ ಕಟ್ಟಿ ಬೆಳಗ್ಗೆಯಿಂದ ಕಾಯುತ್ತಿರುವವರ ಗ್ರಾಮೀಣ ಭಾಗದ ರೈತರ ಗೋಳು ಮಾತ್ರ ಹೇಳತೀರದಾಗಿದೆ.
ಇದೇ ವೇಳೆ ಮಾಧ್ಯಮದವರು ಚಿತ್ರೀಕರಣ ಮಾಡಲು ಮುಂದಾದಾಗ, ಮಾಧ್ಯಮದವರು ಎಂದರೂ ಕೂಡಾ ಕಚೇರಿಯ ಅನಧಿಕೃತ ವ್ಯಕ್ತಿಯೋರ್ವ ಮಾಧ್ಯಮದವರನ್ನೇ ಚಿತ್ರೀಕರಣ ಮಾಡಲು ಮುಂದಾದಾಗ, ಬಿಜೆಪಿಯ ಮುಖಂಡರು ಆತನ ಮೇಲೆ ಗರಂ ಆಗಿದ್ದರಿಂದ ಬಳಿಕ ಸುಮ್ಮನಾದ.
ಆದರೆ ಕೇವಲ ಅರಸಿಕೆರೆಯಲ್ಲಿ ಮಾತ್ರವಲ್ಲ ಹಿಂದೆ ಹಾಸನದಲ್ಲಿ ಕೂಡ ರೇವಣ್ಣ ಉಪನೋಂದಣಾಧಿಕಾರಿಗಳ ಕಚೇರಿಗೆ ದಾಳಿ ನಡೆಸಿ ಲಂಚದ ಬಗ್ಗೆ ಪ್ರಸ್ತಾಪ ಮಾಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಇದರ ಬೆನ್ನಲ್ಲಿಯೇ ಅರಸೀಕೆರೆ ತಾಲೂಕು ಕಚೇರಿಯಲ್ಲಿ ನಡೆದಿರುವ ಉಪನೋಂದಣಾಧಿಕಾರಿಗಳ ಭ್ರಷ್ಟಾಚಾರವನ್ನು ಬಿಜೆಪಿ ಮುಖಂಡರು ಬಯಲಿಗೆಳೆದಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೂಡ ಇಂತಹದೇ ಪ್ರಕರಣಗಳು ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ತಕ್ಷಣ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.