ಹಾಸನ: ಸರ್ಕಾರ ರೈತ ವಿರೋಧಿ ನೀತಿಯ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಹೇಮಾವತಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹದೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ , ವಿದ್ಯುತ್ ಖಾಸಗೀಕರಣ ಕಾಯ್ದೆ ವಿರೋಧಿಸಿ ಹಾಗೂ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರೈತರ ಬದುಕು ಹಾಳಾದರೆ ಎಲ್ಲರಿಗೂ ದಕ್ಕೆ ಉಂಟಾಗುತ್ತದೆ. ಆಹಾರದ ಭದ್ರತೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ದೇಶವೇ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಲಾಕ್ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ಹಾಗೂ ಇತರ ಎಲ್ಲ ವಿಭಾಗದ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ರೈತ ವಿರೋಧಿ ಕಾಯ್ದೆ ಖಂಡಿಸಿ ಹಾಸನದಲ್ಲಿ ಉಪವಾಸ ಸತ್ಯಾಗ್ರಹ ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನವೂ ಲಭಿಸಿಲ್ಲ. ನೀಡಿರುವ ವೇತನವನ್ನು ಮುಂಗಡವಾಗಿ ನೀಡಿ ಅದಕ್ಕಾಗಿ ಪರ್ಯಾಯ ದಿನದ ಕೆಲಸಕ್ಕೆ ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.
ಆರೋಗ್ಯ ಸೇವೆಯಲ್ಲಿ ತೊಡಗಿರುವ ಕೋವಿಡ್ ಸೇನಾನಿಗಳಾದ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯ, ಅರೆವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಮುನ್ಸಿಪಾಲ್ ನೌಕರರು, ಗ್ರಾಮ ಪಂಚಾಯತ್ ನೌಕರರು ಮುಂತಾದವರಿಗೆ ಅಗತ್ಯ ಪಿಪಿಇ ಕಿಟ್ಗಳು, ವೇತನ ಹಾಗೂ ಪ್ರೋತ್ಸಾಹ ಭತ್ಯೆಯನ್ನು ನೀಡುವುದರೊಂದಿಗೆ ಅವರ ಆರೋಗ್ಯದ ಸಂರಕ್ಷಣೆಗೆ ಅಗತ್ಯ ಕ್ರಮಗಳಾಗಬೇಕಿದೆ. ಅದರಲ್ಲಿನ ಲೋಪದಿಂದಾಗಿ ಈಗಾಗಲೇ ನೂರಾರು ಜನ ತಮ್ಮ ಪ್ರಾಣವನ್ನು ತೆರಬೇಕಾಗಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.