ಹಾಸನ/ಚಿಕ್ಕಮಗಳೂರು :ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಸಿಎಎ, ಎನ್‌ಆರ್‌ಸಿ ವಿರೋಧಿಸಿ ಕರೆ ನೀಡಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಹಿನ್ನೆಲೆ ವಿವಿಧ ಸಂಘಟನೆಗಳಿಂದ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೆಎಸ್ಆರ್ಟಿಸಿ ಬಸ್, ಆಟೋ, ಕಾರು, ಟೆಂಪೊ ಸಂಚಾರ ಎಂದಿನಂತಿತ್ತು. ಅಂಗಡಿಗಳು, ಚಲನಚಿತ್ರ ಮಂದಿರಗಳು, ಪೆಟ್ರೋಲ್ ಬಂಕ್ ಇತರೆ ವಹಿವಾಟುಗಳು ಅಡೆತಡೆಯಿಲ್ಲದೆ ನಡೆಯಿತು. ಹಾಸನ ನಗರ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಕೆಲ ಅಂಗಡಿಗಳು ಮುಚ್ಚಿರುವುದು ಬಿಟ್ಟರೆ ಉಳಿದಂತೆ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಜಿಲ್ಲೆಯ ಸಿಪಿಐ(ಎಂ), ಸಿಪಿಐ, ದಲಿತ, ರೈತ, ಕಾರ್ಮಿಕರ, ವಿದ್ಯಾರ್ಥಿ, ಯುವಜನ, ಮಹಿಳಾ, ಮುಸ್ಲಿಂ, ಅಲ್ಪಸಂಖ್ಯಾತ ಹಾಗೂ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಮತ್ತಿತರೆ ಜಾತ್ಯಾತೀತ ಪ್ರಜಾಸತ್ತಾತ್ಮಕ ಸಂಘಟನೆಗಳು ಒಟ್ಟಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ಸೇರಿ ಕೆಲ ಸಮಯ ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕ ಕ್ರಮವಾಗಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.