ಸಕಲೇಶಪುರ (ಹಾಸನ): ಕೊರೊನಾ ಹಿನ್ನೆಲೆ ರೆಸಾರ್ಟ್ ಹಾಗೂ ಹೋಮ್ಸ್ಟೇಗಳನ್ನು ಮಳೆಗಾಲ ಮುಗಿಯುವವರೆಗೂ ಮುಚ್ಚಬೇಕೆಂದು ಆಗ್ರಹಿಸಿ ತಾಲೂಕಿನ ದೇವಾಲದಕೆರೆ ಸಮೀಪ ಗ್ರಾಮಾಭಿವೃದ್ಧಿ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮಜಗಹಳ್ಳಿ ಜಲಪಾತ ಸಮೀಪ ಸೇರಿದ ಗ್ರಾಮಸ್ಥರು ರೆಸಾರ್ಟ್ ಹಾಗೂ ಹೋಮ್ಸ್ಟೇಗಳನ್ನು ತೆರೆಯಲಾಗಿರುವುದರಿಂದ ಹೊರ ಊರುಗಳಿಂದ ವ್ಯಾಪಕವಾಗಿ ಪ್ರವಾಸಿಗರು ಬರುತ್ತಿದ್ದಾರೆ ಎಂದು ಆರೋಪಿಸಿದರು.
ಸಕಲೇಶಪುರ: ಹೋಮ್ಸ್ಟೇ, ರೆಸಾರ್ಟ್ ತೆರೆಯಲು ಅನುಮತಿ ನೀಡದಂತೆ ಪ್ರತಿಭಟನೆ ಅಪರಿಚಿತ ವ್ಯಕ್ತಿಗಳಿಂದ ತಾಲೂಕಿನಲ್ಲಿ ಕೋವಿಡ್ ಪ್ರಕರಣ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜಿಲ್ಲೆಯ ಬೇರೆ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆಯಾದರೂ ತಾಲೂಕಿನಲ್ಲಿ ಮಾತ್ರ ಇಲ್ಲಿಯವರೆಗೆ ಯಾವುದೇ ರೀತಿಯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿಲ್ಲ ಎಂದರು.
ಹೋಮ್ಸ್ಟೇ ಹಾಗೂ ರೆಸಾರ್ಟ್ಗಳಿಗೆ ಬರುವ ಪ್ರವಾಸಿಗರು ಅಡ್ಡಾದಿಡ್ಡಿ ಸಂಚರಿಸುತ್ತಿದ್ದು ಹಲವಾರು ಮಂದಿ ಮಾಸ್ಕ್ಗಳನ್ನು ಸಹ ಹಾಕುವುದಿಲ್ಲ, ಇದರಿಂದಾಗಿ ದೇವಾಲದಕೆರೆ ಹಾಗೂ ಹಾನುಬಾಳ್ ಗ್ರಾ.ಪಂ ವ್ಯಾಪ್ತಿಯ ಜನರಿಗೆ ಆತಂಕ ಉಂಟಾಗಿದೆ. ಮಳೆಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಕೊರೊನಾ ವೇಗವಾಗಿ ಹರಡುತ್ತದೆ. ಹೊರ ಊರಿನಿಂದ ಬಂದ ಪ್ರವಾಸಿಗರಲ್ಲಿ ಯಾರಿಗಾದರೂ ಕೊರೊನಾ ಇದ್ದರೆ ರೆಸಾರ್ಟ್‌ಗಳ ಜೊತೆಗೆ ಇಡೀ ಗ್ರಾಮವನ್ನು ಸೀಲ್ಡೌನ್ ಮಾಡಬೇಕಾಗುತ್ತದೆ. ಇದರಿಂದ ವಿನಾಕಾರಣ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಜನತೆ ಕಳವಳ ವ್ಯಕ್ತ ಪಡಿಸಿದರು.
ಕೊರೊನಾ ಬಂದರೆ ತಕ್ಷಣ ಚಿಕಿತ್ಸೆ ಪಡೆಯಲು ತಾಲೂಕಿನಲ್ಲಿ ಯಾವುದೇ ಆಸ್ಪತ್ರೆಯಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೆ ಹೋಮ್ಸ್ಟೇ ಹಾಗೂ ರೆಸಾರ್ಟ್ಗಳನ್ನು ಒಂದೆರಡು ತಿಂಗಳ ಮಟ್ಟಿಗೆ ಬಂದ್ ಮಾಡಬೇಕೆಂದು ಆಗ್ರಹಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ತಹಶೀಲ್ದಾರ್ ಮಂಜುನಾಥ್ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿ, ಕೋವಿಡ್-19 ಪ್ರಕರಣ ತಾಲೂಕಿನಲ್ಲಿ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೆಸಾರ್ಟ್ ಹಾಗೂ ಹೋಮ್ಸ್ಟೇಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಆದೇಶ ನೀಡಲಾಗಿದೆ. ಯಾರಾದರೂ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೆಸಾರ್ಟ್ ಹಾಗೂ ಹೋಮ್ಸ್ಟೇಗಳನ್ನು ಮುಚ್ಚುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರರ ಮನವಿ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣಾ ನಿರೀಕ್ಷಕ ಚಂದ್ರಶೇಖರ್ ಹಾಗೂ ನಗರ ಠಾಣೆ ಪಿಎಸ್ಐ ಚಂದ್ರಶೇಖರ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಹಾನುಬಾಳ್ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಮದನಾಪುರ ರಾಜೀವ್, ಎಪಿಎಂಸಿ ಮಾಜಿ ಅಧ್ಯಕ್ಷ ಸುಂದರೇಶ್, ಗ್ರಾ.ಪಂ ಸದಸ್ಯ ಪೂರ್ಣೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್, ಎಪಿಎಂಸಿ ಸದಸ್ಯ ಲೋಕೇಶ್, ಜೆಡಿಎಸ್ ಹಾನುಬಾಳ್ ಹೋಬಳಿ ಘಟಕದ ಅಧ್ಯಕ್ಷ ಮೋಹನ್, ಚಂದ್ರೇಗೌಡ, ವಿನಯ್, ವಿಷ್ಣು ಸೇರಿದಂತೆ ಇನ್ನು ಅನೇಕರು ಭಾಗಿಯಾಗಿದ್ದರು.