ಹಾಸನ :ಅರಸೀಕೆರೆ ತಾಲೂಕಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.
ರಸ್ತೆ ಕಾಮಗಾರಿ ಅವ್ಯವಹಾರ, ಅಧಿಕಾರಿಗಳ ವಿರುದ್ಧ ಆರೋಪ: ಕರವೇ ಪ್ರತಿಭಟನೆ
ತುಂಡು ಗುತ್ತಿಗೆ ಮೂಲಕ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಕಾನೂನು ಬಾಹಿರ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದ್ರು.
ಅರಸೀಕೆರೆ ಸಾಯಿನಾಥ ರಸ್ತೆಗೆ ಕಳಪೆ ಹಾಗೂ ಅವೈಜ್ಞಾನಿಕವಾಗಿ ರಾತ್ರೋರಾತ್ರಿ ತ್ವರಿತಗತಿಯಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗುತ್ತಿದೆ. ಈ ರಸ್ತೆ ಮೂಲಕ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಹೊಸದಾಗಿ ಒಳಚರಂಡಿ ಪೈಪುಗಳನ್ನು ರಸ್ತೆ ಮಧ್ಯೆ ಅಳವಡಿಸಲಾಗಿದ್ದು, ರಸ್ತೆಯ ಇಕ್ಕೆಲೆಗಳಲ್ಲಿ ಮನೆಗಳಿಗೆ ಹೊಸ ಸಂಪರ್ಕ ಕಲ್ಪಿಸಿಲ್ಲ. ಇದು ಅವೈಜ್ಞಾನಿಕ ಕಾಮಗಾರಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರ ರಕ್ಷಣೆಯಲ್ಲಿಭೂಸೇನಾ ನಿಗಮದ ಅಧಿಕಾರಿಗಳಿಗೆ ಹೆದರಿಸಿ ಇಲ್ಲಿನ ಶಾಸಕರು ಹಾಗೂ ಬಿಜೆಪಿ ನಗರಸಭಾ ಅಧ್ಯಕ್ಷ ಶಾಮೀಲಾಗಿ ರಾತ್ರೋರಾತ್ರಿ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿ ಮುಗಿಸಿದ್ದಾರೆ. ಗುತ್ತಿಗೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಯಾವುದೇ ಕ್ರಿಯಾ ಯೋಜನೆ ತಯಾರಿಸದೇ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಕರವೇ ಕಾರ್ಯಕರ್ತರು ಮನವಿ ಮಾಡಿದ್ರು.