ಹಾಸನ:ನಗರ ಸಮೀಪ ನೂತನ ಕೃಷ್ಣ ನಗರ ಬಡಾವಣೆ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸಮೀಪದ ಕೆಂಚಟ್ಟಳ್ಳಿ, ಬೂವನಹಳ್ಳಿ, ಸಮುದ್ರವಳ್ಳಿ, ಗೇಕರವಳ್ಳಿಯ ಗ್ರಾಮದ ಸುಮಾರು 1,218 ಎಕರೆ ಪ್ರದೇಶದಲ್ಲಿ 15,000 ನಿವೇಶನ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಡಾವಣೆ ನಿರ್ಮಾಣ ಪ್ರಸ್ತಾವನೆಗೆ ಶೀಘ್ರ ಒಪ್ಪಿಗೆ ದೊರೆತರೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ. ಕೃಷ್ಣ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ನಾಲ್ಕು ಗ್ರಾಮದ 2000 ಅಧಿಕ ರೈತರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಕೆಲವು ರೈತರು ಜಮೀನು ನೀಡಲು ಹಿಂದೇಟು ಹಾಕಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆದು ಎಲ್ಲ ರೀತಿಯ ಅಡೆತಡೆಗಳನ್ನು ನಿವಾರಿಸಿ ಬಡಾವಣೆ ನಿರ್ಮಾಣದ ಕಾರ್ಯವನ್ನು ಆದಷ್ಟು ಬೇಗ ಪ್ರಾರಂಭಿಸುವ ವಿಶ್ವಾಸವಿದೆ ಎಂದು ವಿವರಿಸಿದರು.
ಸರ್ಕಾರದ ನಿಯಮದಂತೆ ಶೇ.50ರ ಅನುಪಾತದಲ್ಲಿ ರೈತರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಉದ್ಯಾನವನಕ್ಕೆ ಬೇಕಾದ ಭೂಮಿ ಮೀಸಲಿರಿಸಿ ಉಳಿದ ಸುಮಾರು 600 ಎಕರೆಯಲ್ಲಿ ನಿವೇಶನ ನಿರ್ಮಾಣ ಮಾಡಲಾಗುವುದು. ಅಷ್ಟೇ ಅಲ್ಲದೆ, ಬಡಾವಣೆಯಲ್ಲಿ ಇತ್ತೀಚೆಗೆ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ನಿವೇಶನ ನೀಡುವ ಉದ್ದೇಶವನ್ನೂ ಹೊಂದಿದ್ದೇವೆ. ಈ ಹಿಂದೆ ಪ್ರಾಧಿಕಾರದಿಂದ ನಿರ್ಮಾಣವಾದ ಎಸ್.ಎಂ.ಕೃಷ್ಣ ನಗರದ ನಿವೇಶನ ಮಾರಾಟದಿಂದ ಪ್ರಾಧಿಕಾರಕ್ಕೆ ಸುಮಾರು ₹ 250 ಕೋಟಿ ಲಾಭವಾಗಿದೆ. ಅಲ್ಲಿನ ಬಹುತೇಕ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನ ಪಡೆದು ಪ್ರಾಧಿಕಾರಕ್ಕೆ ಹಣ ಪಾವತಿಸದ ನಿವೇಶನವನ್ನು ವಶಕ್ಕೆ ಪಡೆ ಹರಾಜು ಮಾಡಲಾಗುವುದು ಎಂದು ತಿಳಿಸಿದರು.