ಹಾಸನ:ಕಟ್ಟೆಪುರದ ಮತಗಟ್ಟೆಯಲ್ಲಿನ ಪ್ರಾಯೋಗಿಕ ವಿವಿಪ್ಯಾಟ್ನಲ್ಲಿ ದೋಷ ಕಂಡುಬಂದಿದ್ದು, ಜೆಡಿಎಸ್ಗೆ 7 ಮತ ಹಾಕಿದ್ರೆ 10 ಮತಗಳೆಂದು ತೋರಿಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಟ್ಟೆಪುರದ ಮತಗಟ್ಟೆ ಸಂಖ್ಯೆ 187ರಲ್ಲಿ ಈ ಘಟನೆ ನಡೆದಿದೆ. ವಿವಿಪ್ಯಾಟ್ನಲ್ಲಿ 7 ಮತಗಳಿಗೆ ಮೂರು ಮತಗಳು ಹೆಚ್ಚುವರಿಯಾಗಿ ತೋರಿಸುತ್ತಿದೆ ಎಂದು ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಗಟ್ಟೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಎ.ಮಂಜು, ಇಲ್ಲಿ ಮತದಾನ ಮಾಡದಂತೆ ಮನವಿ ಮಾಡಿದರು. ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆಯನ್ನೂ ಮಾಡಿದರು. ಪ್ರತಿಭಟನಾಕಾತರರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟ ಘಟನೆಯೂ ನಡೆದಿದೆ.
ಪತ್ನಿಯೊಂದಿಗೆ ಎ. ಮಂಜು ಮತದಾನ ಎ. ಮಂಜು ಮತದಾನ:
ಬಿಜೆಪಿ ಅಭ್ಯರ್ಥಿ ಎ.ಮಂಜು ಅರಕಲಗೂಡು ತಾಲೂಕಿನ ಹನ್ಯಾಳುವಿನಲ್ಲಿ ಜನರ ಜತೆ ಕ್ಯೂನಲ್ಲಿ ನಿಂತು ಮತದಾನ ಮಾಡಿದರು. ಮಂಜು ಜೊತೆ ಪತ್ನಿ ತಾರಾ ಮಂಜು ಸಹ ಮತದಾನ ಮಾಡಿದರು.
ಮತದಾನದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ಬಾರಿ ಅಲ್ಪ ಮತಗಳಿಂದ ದೇವೇಗೌಡರ ವಿರುದ್ಧ ಪರಾಭವಗೊಂಡಿದ್ದೆ. ಈ ಬಾರಿ ದೇವೇಗೌಡರ ಮೊಮ್ಮಗನ ವಿರುದ್ಧ ಸ್ಪರ್ಧಿಸಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ನನಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ನಿನ್ನೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಹಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಆತ ನನ್ನ ಹೆಸರನ್ನು ಪ್ರಸ್ತಾಪಿಸಿದ್ದರ ಹಿಂದೆ ದುರುದ್ದೇಶವಿದೆ. ಆ ವ್ಯಕ್ತಿ ಯಾರೆಂಬುದೇ ನನಗೆ ಗೊತ್ತಿಲ್ಲ. ಕಾನೂನುಬದ್ಧವಾಗಿ ಖಾಸಗಿ ಬ್ಯಾಂಕ್ನಲ್ಲಿ 25 ಲಕ್ಷ ರೂ. ಹಣ ಡ್ರಾ ಮಾಡಿದ್ದು ಸತ್ಯ. ಹಣವನ್ನು ಬ್ಯಾಂಕಿನಿಂದ ಪಡೆದಿದ್ದಕ್ಕೆ ನನ್ನ ಬಳಿ ದಾಖಲೆ ಇದೆ. ಚುನಾವಣಾ ಅಧಿಕಾರಿಗಳು ತನಿಖೆ ಮಾಡಿದರೆ ನಾನು ದಾಖಲೆಗಳನ್ನು ಕೊಡಲು ಸಿದ್ಧ ಎಂದರು.