ಹಾಸನ:ಜಿಲ್ಲೆಯ ಉಗಿನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿಸ್ಮರಣೀಯ ದಿನ. ಕಾರಣ ದೇಶದ ಪ್ರಧಾನಿ, ಸಹಕಾರ ಸಂಘದ ಪ್ರಗತಿ ಹಾಗೂ ರೈತ ಪರ ಕಾರ್ಯಗಳಿಗಾಗಿ ಸಂಸ್ಥೆಯನ್ನು ಗುರುತಿಸಿ ಅದರ ಪ್ರತಿನಿಧಿಗಳೊಂದಿಗೆ ನೇರ ವಿಡಿಯೋ ಸಂವಾದ ನಡೆಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಹೌದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ದೇಶವನ್ನುದ್ದೇಶಿಸಿ ಮಾಡಿದ ಆತ್ಮ ನಿರ್ಭರ್ ಅನ್ನದಾತ ಕುರಿತ ನೇರ ಟಿ.ವಿ. ಸಂವಾದದಲ್ಲಿ ಜಿಲ್ಲೆಯ ಉಗಿನೆ ಪಂಚಾಯಿತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಅವರೊಂದಿಗೆ ಮಾತಾನಾಡಿದರು. ಇದು ಇಡೀ ದೇಶದ ಗಮನ ಸೆಳೆದಿದೆ. ಭಾಷಾಂತರಕಾರರ ನೆರವಿನೊಂದಿಗೆ ಬಸವೇಗೌಡ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಸ್ಥೆಯ ಪ್ರಾರಂಭ, ಬೆಳವಣಿಗೆ, ಸಾಧನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಗಮನ ಹಾಸನ ಜಿಲ್ಲೆಯ ಸಹಕಾರಿ ಸಂಘದ ಸಾಧಕರೊಂದಿಗೆ ಪ್ರಧಾನಿ ಸಂವಾದ ಸಂವಾದದ ಪ್ರಮುಖ ವಿಷಯಗಳು:
ಸಂವಾದದಲ್ಲಿ ಪ್ರಧಾನಿ ಮೋದಿ ಪ್ರಶ್ನೆಗಳಿಗೆ ಸಂಘದ ಕಾರ್ಯದರ್ಶಿ ಬಸವೇಗೌಡ ಹೀಗೆ ಉತ್ತರಿಸಿದರು.
ಪ್ರಶ್ನೆ: 01. ಸಂಘದ ಪ್ರಾರಂಭ ಮತ್ತು ಅಭಿವೃದ್ಧಿ ಹೇಗೆ ಮಾಡಿದಿರಿ?
ಬಸವೇಗೌಡ: ಕಳೆದ 44 ವರ್ಷಗಳ ಹಿಂದೆ ಸಂಘವನ್ನು ಆರಂಭಿಸಿದ್ದು, 29 ಗ್ರಾಮಗಳ 2,300 ಕಿಸಾನ್ ಕುಟುಂಬಸ್ಥರು ಇದರ ಸದಸ್ಯರಾಗಿದ್ದಾರೆ. ವಾರ್ಷಿಕವಾಗಿ ಸಂಘ 50 ಕೋಟಿ ರೂ.ಗಳ ವಹಿವಾಟು ನಡೆಸುತ್ತದೆ ಎಂದರು.
ಪ್ರಶ್ನೆ: 02. ಜಿಲ್ಲೆಯಲ್ಲಿ ಯಾವಾ ಯಾವ ಬೆಳೆ ಬೆಳೆಯುತ್ತೀರಿ?
ಬಸವೇಗೌಡ: ಜಿಲ್ಲೆಯಲ್ಲಿ ಶುಂಠಿ, ಅಡಿಕೆ, ಮೆಕ್ಕೆ ಜೋಳ, ಆಲೂಗೆಡ್ಡೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುವುದಾಗಿ ಅವರು ವಿವರಿಸಿದರು.
ಪ್ರಶ್ನೆ 03. ಸಂಘ ಪ್ರಾರಂಭಿಸುವ ಆಲೋಚನೆ ಬಂದದ್ದು ಹೇಗೆ?
ಬಸವೇಗೌಡ: ರೈತರಿಗೆ ಸ್ಥಳೀಯವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕಳೆನಾಶಕ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳು ದೊರೆಯುತ್ತಿರಲಿಲ್ಲ. ಹಾಗಾಗಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈಗ ರೈತರಿಗೆ ಈ ಸಂಘದಿಂದ ಕೃಷಿ ಸಂಬಂಧಿಸಿದ ವಸ್ತುಗಳ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ಪ್ರಶ್ನೆ 04. ಸಂಘದ ವತಿಯಿಂದ ಈಗ ಯಾವ ಯೋಜನೆಯನ್ನು ರೂಪಿಸಿದ್ದೀರಿ? ಅದರಿಂದ ರೈತರಿಗೆ ಯಾವ ರೀತಿಯ ಅನುಕೂಲವಾಗುತ್ತದೆ?
ಬಸವೇಗೌಡ: ಗ್ರಾಮದಲ್ಲಿ 1200 ಮೆಟ್ರಿಕ್ ಟನ್ ಅಷ್ಟು ದಾಸ್ತಾನು ಮಾಡಬಹುದಾದ ಗೋದಾಮು ನಿರ್ಮಿಸಲು ಯೋಜಿಸಿದ್ದು, 40 ಲಕ್ಷ ರೂ. ವೆಚ್ಚವಾಗಲಿದೆ. ಅದಕ್ಕಾಗಿ ನಬಾರ್ಡ್ನಿಂದ 32 ಲಕ್ಷ ರೂ. ಸಾಲ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಈ ಗೋದಾಮು ನಿರ್ಮಾಣದಿಂದ ಸ್ಥಳೀಯವಾಗಿ ಸುಮಾರು 3,000 ರೈತರಿಗೆ ಉಪಯೋಗವಾಗಲಿದೆ. ಅಡಿಕೆ, ಮೆಕ್ಕೆಜೋಳ ಇನ್ನಿತರೆ ಬೆಳೆಗಳನ್ನು ಉತ್ತಮ ಬೆಲೆ ಸಿಗುವವರೆಗೂ ವ್ಯವಸ್ಥಿತವಾಗಿ ದಾಸ್ತಾನು ಮಾಡಬಹುದು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಕೃಷಿ ಆದಾಯ ಹೆಚ್ಚಲಿದೆ. ರೈತರು ದಾಸ್ತಾನು ಮಾಡಿದ ಬೆಳೆಗೆ ಸಾಲ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ಇದರ ನಿರ್ಮಾಣ ಕೆಲಸ ಇನ್ನೂ 3 ತಿಂಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.
ಮಾಹಿತಿಗೆ ಹರ್ಷ ವ್ಯಕ್ತಪಡಿಸಿದ ಮೋದಿ:
ಬಸವೇಗೌಡ ಅವರು ನೀಡಿದ ಮಾಹಿತಿಯಿಂದ ಸಂತೋಷಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಸ್ಥರನ್ನು ಒಟ್ಟುಗೂಡಿಸಿ ದೂರದೃಷ್ಟಿಯಿಂದ ಸಹಕಾರಿ ಸಂಘದ ಮೂಲಕ ಮಾಡುತ್ತಿರುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ನಮ್ಮ ಸರ್ಕಾರ ಕೃಷಿಕರ ಬೆನ್ನುಲುಬಾಗಿ ನಿಲ್ಲುತ್ತದೆ, ರೈತರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತದೆ, ನಿಮ್ಮ ಈ ಕಾರ್ಯ ಮುಂದೆ ಯಶಸ್ವಿಯಾಗಲಿ, ರೈತರು ಯಾವುದೇ ರೀತಿಯ ತೊಂದರೆಗೆ ಒಳಗಾಗದೆ ಸಹಕಾರ ಸಂಘಗಳಿಂದ ಸಹಾಯ ಪಡೆದು ಬದುಕು ಕಟ್ಟಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಸರ್ಕಾರ ರೂಪಿಸಲಿದ್ದು ಅವುಗಳನ್ನು ರೈತರುಗಳಿಗೆ ತಲುಪಿಸುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಜಿಲ್ಲೆಯ ರೈತರಂತೆ ಕರ್ನಾಟಕದ ಪ್ರತಿಯೊಂದು ಗ್ರಾಮದ ರೈತರು ಮುಂದಾಲೋಚನೆಯಿಂದ ತಮ್ಮ ಸಂಘಗಳ ಮೂಲಕ ಸಹಕಾರದಿಂದ ಕೃಷಿ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನೆಡೆದರೆ ಅನ್ನದಾತರ ಆತ್ಮ ನಿರ್ಭರ್ ಯೋಜನೆ ಯಶಸ್ವಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯ ಮಾತುಗಳನ್ನಾಡಿದರು.
ದೇಶದ ಗಮನ ಹಾಸನ ಜಿಲ್ಲೆಯ ಸಹಕಾರಿ ಸಂಘದ ಸಾಧಕರೊಂದಿಗೆ ಪ್ರಧಾನಿ ಸಂವಾದ ಹರ್ಷ ವ್ಯಕ್ತಪಡಿಸಿದ ಬಸವೇಗೌಡ:
ವಿಡಿಯೋ ಸಂವಾದ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಬಸವೇಗೌಡ, ಸಹಕಾರಿ ಕ್ಷೇತ್ರದ ಸಾಧನೆ ಗುರುತಿಸಿ ಪ್ರಧಾನಿಯವರು ತಮ್ಮೊಂದಿಗೆ ಮಾತನಾಡಿದ್ದಾರೆ. ಇದು ತಮಗೆ ಅಪಾರ ಸಂತಸ ತಂದಿದೆ, ಜವಾಬ್ದಾರಿಯನ್ನು ಸಹ ಹೆಚ್ಚಿಸಿದೆ. ಇದು ತಮಗೆ ಇನ್ನಷ್ಟು ಸ್ಫೂರ್ತಿ ತುಂಬಿದೆ. ಈಗ ಮಾಡಿರುವುದು ಬಹಳ ಕಡಿಮೆ. ಅಗಬೇಕಿರುವುದು ತುಂಬಾ ಇದೆ. ಎಲ್ಲರ ಸಹಕಾರ ಪಡೆದು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.