ಹಾಸನ: ‘ಸೋಲಿನ ಭೀತಿಯಿಂದ ಶಾಸಕ ಹೆಚ್.ಡಿ.ರೇವಣ್ಣ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕ್ಷೇತ್ರ ಕಳೆದುಕೊಂಡಾಗ ಯಾರೇ ಆಗಲಿ ಅಲುಗಾಡೋದು ಸಹಜ. ಅಂತೆಯೇ ಕೆ.ಆರ್.ಪೇಟೆಯಲ್ಲಿ ಭೂಕಂಪ ಆದ್ರೆ ಹಾಸನ ಅಲುಗಾಡುತ್ತೆ’ ಎಂದು ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದರು.
ಪ್ರೀತಂ ಗೌಡಗೆ ಕೆ.ಆರ್.ಪೇಟೆಯಲ್ಲಿ ಏನು ಕೆಲಸ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂಗೌಡ, ‘ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಭಾರತ ದೇಶದ ಯಾವ ಮೂಲೆಯಲ್ಲಾದ್ರೂ ಇರುತ್ತೇನೆ. ಅದನ್ನ ಕೇಳುವುದಕ್ಕೆ ಅವರ್ಯಾರು?. ಕೆ.ಆರ್.ಪೇಟೆ ಮಾತ್ರ ಅಲ್ಲ ಹೊಳೆನರಸೀಪುರ, ಪಡುವಲಹಿಪ್ಪೆಯಲ್ಲಾದ್ರೂ ಇರ್ತೀನಿ. ಇವರೇನು ಪಾಳೆಗಾರರಾ?, ನಾನೂ ಗೌಡನೇ? ನಾನೂ ಹೇಮಾವತಿ ನೀರೇ ಕುಡಿದಿರೋದು’ ಎಂದು ವಾಗ್ದಾಳಿ ನಡೆಸಿದರು.
‘ಧಮ್ಕಿ, ಪಾಳೆಗಾರಿಕೆ ಎಲ್ಲವೂ 2019 ಜುಲೈಗೆ ಮುಗಿಯಿತು. ಅವರು ಹೇಳಿದಂತೆ ಕೇಳಿಕೊಂಡು ಸರ್ಕಾರ ನಡೆಸೋಕೆ ಆಗುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ’ ಎಂದು ಕಿಡಿಕಾರಿದರು.
ಹೆಚ್ ಡಿ ರೇವಣ್ಣ ಹೇಳಿಕೆಗೆ ಪ್ರೀತಂ ಗೌಡ ತಿರುಗೇಟು ಉಪ ಚುನಾವಣೆ ಹಣ ಹಂಚಿಕೆ ಆರೋಪಕ್ಕೆ ಕಿಡಿಕಾರಿದ ಪ್ರೀತಂ, ‘ರೇವಣ್ಣ ಅವರು ಮಗನ ಚುನಾವಣೆ ಮಾಡುವಾಗ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಹಂಚಿ ಚುನಾವಣೆ ಮಾಡಿದ್ರಾ? ಮಾತನಾಡುವಾಗ ಅವರು ಎನು ಮಾಡಿದ್ರು ಅನ್ನೋದನ್ನ ಯೋಚನೆ ಮಾಡಲಿ. ಹಳೆ ಮೈಸೂರು ಭಾಗದಲ್ಲಿ ಅವರ ಸಾರ್ವಭೌಮತ್ವ ಕೆ.ಆರ್.ಪೇಟೆ ಚುನಾವಣೆ ಮೂಲಕ ಕಳಚಿ ಬೀಳಲಿದೆ’ ಎಂದು ಭವಿಷ್ಯ ನುಡಿದರು.
ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ರೇವಣ್ಣ ಮಾತ್ರ ವಿವೇಕಾನಂದರು, ನಾವೆಲ್ಲಾ ಗಬ್ಬರ್ ಸಿಂಗ್ ಅನ್ನೋ ರೀತಿ ಮಾತನಾಡುವುದು ಬಿಡಬೇಕೆಂದ ಅವರು, ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 14 ಸ್ಥಾನ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.