ಹಾಸನ : ಕಾಂಗ್ರೆಸ್ ಹಾಗೂ ಬಿಜೆಪಿ ಕೆಲ ಮುಖಂಡರು ಜನಸಂಪರ್ಕ ದಲ್ಲಿದ್ದಾರೆ ಒಳ್ಳೆ ಸಮಯ ನೋಡಿ ಅವರನ್ನ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ, ಈ ಮೂಲಕ ಪರೋಕ್ಷವಾಗಿ ಆಪರೇಷನ್ ಜೆಡಿಎಸ್ ಮಾಡುವ ಸುಳಿವನ್ನು ಪ್ರಜ್ವಲ್ ನೀಡಿದರು.
ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ. ಪ್ರತಿ ವರ್ಷ ನಾನು ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಚುನಾವಣಾ ಸಂದರ್ಭದಲ್ಲಿ ಕುಟುಂಬದ ಅಭ್ಯರ್ಥಿ ಗೆಲುವಿಗೆ ಒಳ್ಳೆಯದಾಗಲಿ ಎಂದು ನಮ್ಮ ಕುಟುಂಬ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದೆ. ಆ ಪರಂಪರೆಯನ್ನು ನಾನು ಕೂಡ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.
ಜೆಡಿಎಸ್ ಪಕ್ಷದಲ್ಲಿ ನನ್ನ ಸೇವೆ ಆರಂಭಿಸಿದ ದಿನದಿಂದಲೂ ಕೂಡ ನಾನು ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಫಲವಾಗಿ ನೆನ್ನೆ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಗುರುತಿಸಿ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರ ಏಳಿಗೆಗಾಗಿ ಈಗಾಗಲೇ ನಾನು ಜಿಲ್ಲೆಯ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೆನೆ. ಬಿಜೆಪಿಯ ಗ್ರಾಮ ಮಂಡಳಿ ಅಧ್ಯಕ್ಷರಾಗಿದ್ದ ಅಗಿಲೆ ಯೋಗೇಶ್ ರನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ.