ಹಾಸನ:ಸಮರ್ಪಕ ಮಾಹಿತಿ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಬೆವರಿಳಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಸಂಸದ ರೇವಣ್ಣ ತರಾಟೆಗೆ ತೆಗೆದುಕೊಂಡರು. ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 75ರ ದೇವರಾಯಪಟ್ಟಣದಿಂದ ಮಾರನಹಳ್ಳಿವರೆಗೆ ಹೆದ್ದಾರಿ ದುರಸ್ತಿ ಕಾಮಗಾರಿ 8 ಕಿ.ಮೀ.ವರೆಗೂ ನಡೆದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಸಭೆ ಗಮನಕ್ಕೆ ತಂದರು.
ಎಂಜಿನಿಯರ್ ಉತ್ತರಕ್ಕೆ ತೃಪ್ತರಾಗದ ಸಂಸದರು, ಎನ್‌ಎಚ್ಎಐ ಯೋಜನಾ ನಿರ್ದೇಶಕರು ಸಭೆಗೆ ಏಕೆ ಬಂದಿಲ್ಲ? ಮೂರು ಬಾರಿ ಪತ್ರ ಬರೆಯಲಾಗಿದೆ. ದಿಶಾ ಸಭೆ ನಿತ್ಯ ನಡೆಯುವುದಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಬರುವುದಿಲ್ಲ ಎಂದರೆ ಏನರ್ಥ? ಎಂದು ಕಿಡಿಕಾರಿದರು.