ಹಾಸನ/ಅರಸೀಕೆರೆ: ಅವರಪ್ಪಂಗೆ ಬಿಬಿಎಂಪಿ ತೋರಿಸಿದ್ದು ನಮ್ಮಪ್ಪ. ಬಿಬಿಎಂಪಿಯಲ್ಲಿ ಅವರಪ್ಪ ದುಡ್ಡು ಮಾಡಿದ್ರು. ಆ ದುಡ್ಡು ತಗೊಂಡು ಬಂದು ಇವನಿಲ್ಲಿ ಎಗರಾಡುತ್ತಿದ್ದಾನೆ ಎಂದು ಮತ್ತೆ ಏಕವಚನದಲ್ಲಿ ಶಾಸಕ ಪ್ರೀತಂ ಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಹರಿಹಾಯ್ದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿನ ಗಣಪತಿ ಆಸ್ಥಾನ ಮಂಟಪದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜನ ಹಾಕಿರುವ ವೋಟಿನಿಂದ ಗೆದ್ದಿರುವೆ, ಪ್ರೀತಂ ಗೌಡ ವೋಟಿಂದ ಅಲ್ಲ. ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳಲಿ. ಆಮೇಲೆ ಎಂಪಿ ಚುನಾವಣೆಗೆ ಬರಲಿ. ಮೊದಲು ವಿಧಾನಸಭಾ ಚುನಾವಣೆ ಬರುತ್ತೆ ಅಲ್ಲಿ ಅವರು ಸೋಲುವುದಂತು ಖಚಿತ. ಸೋತ ಬಳಿಕ ನನ್ನ ವಿರುದ್ಧವೇ ಎಂಪಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾವು ಹಾಸನದಲ್ಲೇ ಇರ್ತೀವಿ. ಅವರು ಈ ಬಾರಿ ದುಡ್ಡು ಮಾಡಿಕೊಂಡು ಬೆಂಗಳೂರಿಗೆ ವಾಪಸ್ ಹೋಗಬಹುದು. ಜಿಲ್ಲೆಯಲ್ಲಿ ಎಲ್ಲರೂ ದೇವೇಗೌಡರ ಹೆಸರನ್ನು ಹೇಳಿಕೊಂಡೇ ರಾಜಕಾರಣ ಮಾಡಿರೋದು. ಹಳ್ಳಿ ಮೈಸೂರಿನಲ್ಲಿ ಶಾಸಕ ಪ್ರೀತಂ ಗೌಡ ಅವರಪ್ಪ ಯಾವುದೋ ಇಂಜಿನೀಯರ್ ಆಗಿದ್ರು. ಅವತ್ತಿನ ದಿನ ರೇವಣ್ಣನವರ ಕೈಕಾಲು ಹಿಡಿದಿದ್ದಕ್ಕೆ ಅವರ ತಂದೆಗೆ ಬಿಬಿಎಂಪಿಯನ್ನು ತೋರಿಸಿಕೊಟ್ರು ನಮ್ಮಪ್ಪ. ಅವರ ಕುಟುಂಬಕ್ಕೆ ನಮ್ಮ ಕುಟುಂಬದಿಂದ ಸಹಕಾರ ಆಗಿದೆ. ಅದನ್ನು ಮೊದಲು ಜ್ಞಾಪಿಸಿಕೊಂಡು ಕೃತಜ್ಞತೆ ತಿಳಿಸುವುದನ್ನು ಮೊದಲು ಕಲಿಯುವುದಕ್ಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.