ಹಾಸನ: ಬೆಂಗಳೂರು ಗಲಭೆಗೆ ಕಾರಣವಾದ ಆರೋಪಿ ನವೀನ್ ಫೇಸ್ಬುಕ್ ಹ್ಯಾಕ್ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ನಾನು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಗಮನಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ತನಿಖೆಯಿಂದ ಬೆಂಗಳೂರು ಗಲಭೆಯ ಸತ್ಯಾಂಶ ಬಯಲಾಗಲಿದೆ: ಪ್ರಜ್ವಲ್ ರೇವಣ್ಣ - Bangalore riots
ಬೆಂಗಳೂರಿನಲ್ಲಿ ನಡೆದ ಗಲಭೆಯ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದು, ಪೊಲೀಸರ ತನಿಖೆ ನಂತರ ಸತ್ಯಾಂಶ ಬಯಲಾಗಲಿದೆ ಎಂದಿದ್ದಾರೆ.
ಹೊಳೆನರಸೀಪುರದ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಮತ್ತು ಪ್ರವಾಹ ಸಂಬಂಧ ನಡೆದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಗಲಭೆಯ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡಲ್ಲ. ಪೊಲೀಸರು ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರಬೇಕಿದೆ. ಇಂತಹ ಸಂದರ್ಭಗಳಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವ ಮೂಲಕ ನ್ಯಾಯ ದೊರಕಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಕಾನೂನುನ್ನ ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದಿತ್ತು.
ಈ ಗಲಭೆ ಪೂರ್ವನಿಯೋಜಿತ ಅಥವಾ ಅಲ್ಲವೆಂಬುದು ಪೊಲೀಸರ ತನಿಖೆಯ ನಂತರ ಗೊತ್ತಾಗಲಿದೆ. ಕೋವಿಡ್ ಸಂದರ್ಭದಲ್ಲಿ ನಾಗರಿಕರಿಗೆ ಮೊದಲೇ ಭಯ ಇರುತ್ತೆ. ಇಂತಹ ಸಂದರ್ಭದಲ್ಲಿ ಇಂತಹ ಕೃತ್ಯ ನಡೆದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ ಎಂದಿದ್ದಾರೆ.