ಹಾಸನ: ಮಾರ್ಚ್ 19 ರಂದು ಸತ್ತ ಆನೆಯಿಂದ ದಂತ ಕತ್ತರಿಸಿದ್ದ ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪ್ರಕರಣ ಸಂಬಂಧ ಹಾಸನ ಅರಣ್ಯ ಇಲಾಖೆ ಕೂಡಾ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು. ಆದರೀಗ ಈ ಆರೋಪಿಗಳ ರಕ್ಷಣೆಗೆ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಮನೇಕಾ ಗಾಂಧಿ ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ದಂತಕ್ಕಾಗಿ ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದಿದ್ದ ಆರೋಪಿಗಳಾದ ಚಂದ್ರೆಗೌಡ ಮತ್ತು ಇತರರು ಬಳಿಕ ಅದನ್ನು ಹೂತು ಹಾಕಿದ್ದರು. ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ಕೇಸ್ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್ಎಫ್ಒ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಕೇಸ್ನಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸುಖಾಸುಮ್ಮನೆ ಆರೋಪ : ಈ ಬಗ್ಗೆ ಸಂಸಂದ ಪ್ರಜ್ವಲ್ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿದ್ದು, ನಿನ್ನೆ ರಾತ್ರಿ ನನಗೆ ಒಂದು ಫೋನ್ ಕರೆ ಬಂತು. ಆನೆ ಕೊಂದ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ನಿಂತಿದ್ದಾರೆ ಎಂದು ಮಾಜಿ ಸಚಿವೆ ಮನೇಕಾ ಗಾಂಧಿಯವರು ಆರೋಪಿಸಿದ್ದಾರೆ. ಮನೇಕಾ ಗಾಂಧಿವರಿಗೆ ಈ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲ. ನನಗೆ ಈ ಬಗ್ಗೆ ಗೊತ್ತಾಗಿದ್ದೆ ಮೊನ್ನೆ ನಡೆದ ದಿಶಾ ಸಭೆಯಲ್ಲಿ ಎಂದರು.