ಹಾಸನ: ಸಾರ್ವಜನಿಕರ ದುಡ್ಡಲ್ಲಿ ನಮ್ಮ ಫೋಟೋಗಳನ್ನು ಹಾಕಿ ಬಿಂಬಿಸಿಕೊಳ್ಳುವುದು ತಪ್ಪು. ಮಾಜಿ ಸಚಿವ ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲಾದರೂ ಒಂದು ಫೋಟೋ ಹಾಕಿಕೊಂಡಿದ್ದಾರಾ? ಯಾರೇ ಜನಪ್ರತಿನಿಧಿಯಾಗಲೀ ಕೆಲಸ ಮಾಡಿತೋರಿಸಬೇಕೇ ಹೊರತು ಫೋಟೋ ಹಾಕಿ ಪೋಸ್ ಕೊಡಬಾರದು ಎಂದು ಪರೋಕ್ಷವಾಗಿ ಹೆಸರು ಪ್ರಸ್ತಾಪಿಸದೆ ಹಾಸನ ಶಾಸಕ ಪ್ರೀತಮ್ ಗೌಡಗೆ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದರು.
ಹಾಸನದ ಉಡುಗೊರೆ ಗ್ರಾಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಕೆಲಸ ಮಾಡುವುದು ಯಾರದೋ ದುಡ್ಡಿನಿಂದಲ್ಲ. ಸರ್ಕಾರದ ದುಡ್ಡು, ಸರ್ಕಾರಕ್ಕೆ ಜನ ದುಡ್ಡು ಕೊಡುತ್ತಾರೆ. ಜನರಿಂದ ಕಂದಾಯ ವಸೂಲಿ ಮಾಡಿ ಅದನ್ನೇ ಬೇರೆಯವರಿಗೆ ಅನುದಾನ ಕೊಡುತ್ತೇವೆ. ಈ ರೀತಿ ಫೋಟೋ ಹಾಕಿಕೊಳ್ಳುವುದು ತಪ್ಪು ಎಂದರು.