ಹಾಸನ :ಕೋವಿಡ್-19 ಸೋಂಕಿನ ಅಪಾಯಕಾರಿ ಪರಿಸ್ಥಿತಿ ಮತ್ತು ಜನರ ಭಯವನ್ನು ದುರುಪಯೋಗ ಮಾಡಿಕೊಂಡು ದಿನಬಳಕೆಯ ವಸ್ತುಗಳನ್ನು ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಕೋವಿಡ್-19 ನಿಯಂತ್ರಣ ಕುರಿತು ಸಭೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ.. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಡೆದ ಎಲ್ಲಾ ತಾಲೂಕಿನ ಟಾಸ್ಕ್ಫೋರ್ಸ್ ಸಮಿತಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕುಗಳಲ್ಲಿ ತಹಶೀಲ್ದಾರರು ಅಂಗಡಿ-ಮುಂಗಟ್ಟುಗಳ ಮಾಲೀಕರುಗಳಿಗೆ ನಿರ್ದಿಷ್ಠ ದರಪಟ್ಟಿ ನಿಗದಿಪಡಿಸಿ, ಅದರಂತೆ ಮಾರಾಟ ಮಾಡುವಂತೆ ಕ್ರಮವಹಿಸಿ ಎಂದು ಸೂಚನೆ ನೀಡಿದ್ರು. ಅಲ್ಲದೇ ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಿರತರಾಗಬೇಕೆಂದು ಹೇಳಿದ್ದಾರೆ.
ಜಿಲ್ಲೆಯ ಜನಸಾಮಾನ್ಯರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಸಕಾರಾತ್ಮಕವಾಗಿ ಸ್ಪಂದಿಸಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿರುವ ವಿಧಾನ ಶ್ಲಾಘನೀಯ. ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ತಾಲೂಕುಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸನ್ನದ್ಧರಾಗಿರುವ ಸ್ವಯಂ ಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನ ಬಳಕೆ ಮಾಡಿ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ, ಅಶಕ್ತರಿಗೆ ಮತ್ತು ಕೊಳಚೆ ಪ್ರದೇಶದ ಜನರಿಗೆ ಆಹಾರ ಮತ್ತು ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವಂತೆ ಸಲಹೆ ನೀಡಿದರು.
ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಅಧಿಕಾರಿಗಳು, ವೈದ್ಯಕೀಯ ಅಧಿಕಾರಿ, ಸಿಬ್ಬಂದಿಯ ಹಿತಕಾಯುವುದು ನಮ್ಮ ಹೊಣೆ. ಹಾಲಿ ಜಿಲ್ಲಾಸ್ಪತ್ರೆ ಹಾಗೂ ಇತರ ಎಲ್ಲಾ ತಾಲೂಕು ಆಸ್ಪತ್ರೆಗಳಳ್ಲಿ ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡಿಸಿ. ಒಂದು ವೇಳೆ ಕೊರೊನಾ ಸೋಂಕು ಪ್ರಕರಣ ಪತ್ತೆಯಾದಲ್ಲಿ ಅವರನ್ನು ನೋಡುವ ವೈದ್ಯರು ಹಾಗೂ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಜಿಲ್ಲೆಗೆ ಬೇಕಾದ ಸ್ಯಾನಿಟೈಸರ್ನ ಖಾಸಗಿ ಕಬ್ಬು ಉತ್ಪಾದನಾ ಕಾರ್ಖಾನೆಯಿಂದ ಪಡೆಯಿರಿ. ಈಗಾಗಲೇ ಶಾಸಕರಾದ ಮುರುಗೇಶ್ ನಿರಾಣಿಯವರೊಂದಿಗೆ ಮಾತನಾಡಿದ್ದು, ಅವರು ಇದನ್ನು ಪೂರೈಸಲು ಸಮ್ಮತಿಸಿದ್ದಾರೆ. ಇದೇ ರೀತಿ ಹೆಚ್ಚುವರಿ ವೆಂಟಿಲೇಟರ್ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಪೂರೈಸಲು ಪ್ರಯತ್ನಿಸಿ ಎಂದರು.