ಹಾಸನ :ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆ ರಾಜ್ಯಕ್ಕೊಂದು ಪ್ರತ್ಯೇಕ ಉಗ್ರ ನಿಗ್ರಹ ಪಡೆ ಬೇಕಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು, ಬಾಂಬ್ ಪತ್ತೆಯಾಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಇರಿಸಲಾಗಿತ್ತು. ದೆಹಲಿಯಲ್ಲಿ ಮಾತ್ರ ಉಗ್ರರ ನಿಗ್ರಹ ಪಡೆಯಿದೆ. ಆದರೆ, ಅವರು ಅಲ್ಲಿಂದ ಹೊರಟು ಬರಲು 16 ಗಂಟೆ ಸಮಯ ಬೇಕಾಗುತ್ತದೆ. ಈಗಿನ ಬೆಳವಣಿಗೆ ಪ್ರಕಾರ ರಾಜ್ಯದಲ್ಲಿ ಪ್ರತ್ಯೇಕ ಉಗ್ರರ ನಿಗ್ರಹ ಪಡೆ ಸನ್ನದ್ಧವಾಗಿರಬೇಕು. ಜೊತೆಗೆ ರಾಜ್ಯದ ಇಂಟಲಿಜೆನ್ಸಿ ಇನ್ನಷ್ಟು ಉತ್ತಮಗೊಳ್ಳಬೇಕು ಎಂದರು.
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ.. ರಾಜ್ಯಕ್ಕೆ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಬಗ್ಗೆ ನಾನು ಸಂಸತ್‌ನಲ್ಲೂ ಪ್ರಸ್ತಾಪಿಸುತ್ತೇನೆ. ಈ ಕೃತ್ಯ ಯಾರೇ ಮಾಡಿದ್ರೂ ಅವರನ್ನ ಬೇಗ ಪತ್ತೆ ಹಚ್ಚಬೇಕು. ಆಯಕಟ್ಟಿನ ಜಾಗದಲ್ಲಿ ಭದ್ರತೆಯನ್ನ ಇನ್ನಷ್ಟು ಬಿಗಿ ಮಾಡಬೇಕು ಎಂದು ಸಲಹೆ ನೀಡಿದರು.
ಲೋಕಸಭಾ ಚುನಾವಣೆ ವೇಳೆ ಎ.ಮಂಜು ನ್ಯಾಯಾಲಕ್ಕೆ ಹೂಡಿದ್ದ ಮೊಕದ್ದಮೆ ವಜಾಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೆ ನ್ಯಾಯಾಲಯದ ಮೇಲೆ ಅಪಾರ ಗೌರವವಿದೆ. ಅವರು ನಮ್ಮ ಮೇಲೆ ಟ್ರಯಲ್ ಮಾಡಿದ್ದಾರೆ. ಇಂದು ಕೋರ್ಟ್ ಸತ್ಯವನ್ನು ಎತ್ತಿಹಿಡಿದಿದೆ. ಇದು ದೇವರ ಹಾಗೂ ತಂದೆ-ತಾಯಿ, ಜನರ ಆಶೀರ್ವಾದ ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ನಾವು ಅದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.