ಹಾಸನ: ಅಕ್ಷರ ದಾಸೋಹ ಯೋಜನೆಯಡಿ ಕಳಪೆ ತೊಗರಿ ಬೇಳೆ ಪೂರೈಕೆಯಾಗಿರುವುದರ ಕುರಿತು ಕೂಡಲೇ ತನಿಖೆ ನಡೆಸಿ ಸಮಸ್ಯೆ ಸರಿಪಡಿಸದಿದ್ದರೆ ಕಾಂಗ್ರೆಸ್ ವತಿಯಿಂದ ಹೋರಾಟ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಎಚ್ಚರಿಸಿದ್ದಾರೆ.
ಅಕ್ಷರ ದಾಸೋಹದಲ್ಲಿ ಕಳಪೆ ಆಹಾರ ಪದಾರ್ಥ ವಿತರಣೆ: ಪ್ರತಿಭಟನೆ ಎಚ್ಚರಿಕೆ - ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ
1.18 ಲಕ್ಷ ಮಕ್ಕಳಿಗೆ ನೀಡುವ ತೊಗರಿ ಬೇಳೆ ಗುಣಮಟ್ಟದಿಂದ ಕೂಡಿರಬೇಕಿತ್ತು. ಇದನ್ನೇ ಮನೆಯಲ್ಲಿ ಪೋಷಕರೂ ಊಟ ಮಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಶಿಕ್ಷಣ ಸಚಿವರು ಕೂಡಲೇ ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕು. ಯಾವ ಕಾರಣಕ್ಕೂ ಕಳಪೆ ತೊಗರಿ ಬೇಳೆ ವಿತರಣೆ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಮಾತನಾಡಿದ ಅವರು, ಇದು ಜನಪ್ರತಿನಿಧಿಗಳ ಸರ್ಕಾರವೋ, ಅಧಿಕಾರಿಗಳ ಸರ್ಕಾರವೋ ಗೊತ್ತಿಲ್ಲ. ಈ ಹಗರಣದಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇವೆ. ಅಕ್ಷರ ದಾಸೋಹ ಯೋಜನೆಯಡಿ ಕಳೆದ 2 ತಿಂಗಳಲ್ಲಿ 711 ಕ್ವಿಂಟಲ್ ತೊಗರಿ ಬೇಳೆ ಪೂರೈಕೆಯಾಗಿದ್ದು, ಅಷ್ಟು ಹಾಳಾಗಿರುವ ಬೇಳೆ ಕೊಟ್ಟರೆ ಆರೋಗ್ಯದ ಗತಿ ಏನು? ಈ ತೊಗರಿ ಬೇಳೆ ಕಳಪೆಯಾಗಿ ತೇವಾಂಶದಿಂದ ಕೂಡಿದೆ. ಈ ಸಂಬಂಧ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಆದರೂ ಕೆಲ ತಾಲೂಕುಗಳಿಗೆ ಅದೇ ಕಳಪೆ ತೊಗರಿ ಬೇಳೆಯನ್ನೇ ಪೂರೈಕೆ ಮಾಡಲಾಗಿದೆ. ಅದನ್ನು ಪಡೆಯುವಾಗ ಮೊದಲೇ ಪರಿಶೀಲಿಸಬೇಕಿತ್ತು ಎಂದರು.
ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಮಾತನಾಡಿ, ಈ ವರ್ಷದ ಬಿತ್ತನೆ ಆಲೂಗೆಡ್ಡೆ ಕಳಪೆಯಾಗಿದ್ದು, ಭೂಮಿಯಲ್ಲೇ ಕೊಳೆತು ಹೋಗುತ್ತಿದೆ. ಕಳೆದ ಬಾರಿ ಬಿತ್ತನೆ ಆಲೂಗೆಡ್ಡೆಗೆ ಸರ್ಕಾರ ಸಬ್ಸಿಡಿ ನೀಡಿತ್ತು. ಆದರೆ ಈ ಬಾರಿ ಕೊಳೆಯುತ್ತಿದ್ದರೂ ರೈತರ ಸಂಕಷ್ಟದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.