ಸಕಲೇಶಪುರ: ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕಾರು ನಿಲ್ಲಿಸಿದ ಹಿನ್ನೆಲೆ ತಹಶೀಲ್ದಾರ್ ಅವರು ಕಾರಿನ ಚಕ್ರಗಳ ಗಾಳಿ ತೆಗೆದರು. ಆದ್ರೆ ತಹಶೀಲ್ದಾರ್ ಕ್ರಮವನ್ನು ಪೇದೆ ಖಂಡಿಸಿ, ಪ್ರತಿಭಟಿಸಿದ ಘಟನೆ ನಗರದಲ್ಲಿ ನಡೆದಿದೆ.
ಪೊಲೀಸ್ ಕಾನ್ಸ್ಟೇಬಲ್ ಪ್ರತಿಭಟನೆ ಗ್ರಾಮಾಂತರ ಠಾಣೆಯ ದಯಾನಂದ್ ಪ್ರತಿಭಟಿಸಿದ ಕಾನ್ಸ್ಟೇಬಲ್. ಜನನಿಬಿಡ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮೆಡಿಕಲ್ ಶಾಪ್ವೊಂದರ ಮುಂದೆ ಪೇದೆ ದಯಾನಂದ್ ತಮ್ಮ ಕಾರು ನಿಲ್ಲಿಸಿ ಔಷಧಿ ತರಲು ಮೆಡಿಕಲ್ ಶಾಪ್ ಒಳಗೆ ಹೋಗಿದ್ದರು. ಈ ವೇಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಕಂಡ ತಹಶೀಲ್ದಾರ್ ಮಂಜುನಾಥ್, ತಮ್ಮ ಕಾರು ಚಾಲಕನಿಗೆ ಕಾನ್ಸ್ಟೇಬಲ್ ಕಾರಿನ ಚಕ್ರದ ಗಾಳಿ ಬಿಡಲು ಸೂಚಿಸಿದ್ದಾರೆ.
ಕಾರಿನ ಚಕ್ರದ ಗಾಳಿ ಬಿಡುವಾಗ ಪೇದೆ ಹೊರ ಬಂದು, ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ. ಆದ್ರೆ ಪೇದೆ ದಯಾನಂದ್ ಅವರು ಮಹಾತ್ಮ ಗಾಂಧಿ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.
ನೋ ಪಾರ್ಕಿಂಗ್ ಸ್ಥಳದಲ್ಲಿ ಕಾನ್ಸ್ಟೇಬಲ್ ಕಾರು ನಿಲುಗಡೆ ಬಳಿಕ ನಗರ ಠಾಣೆ ಪಿಎಸ್‌ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಬಂದು ಇತರ ಪೋಲಿಸರ ಸಹಾಯದಿಂದ ಕಾನ್ಸ್ಟೇಬಲ್ರನ್ನು ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕ್‌ಅಪ್ ವಾಹನದ ಮೂಲಕ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಸಮಾಜ ಸೇವಕ ಅಭಿಷೇಕ್ ಮಾತನಾಡಿ, ಕಾನೂನು ಕಾಪಾಡಬೇಕಾದ ಪೊಲೀಸ್ ಕಾನ್ಸ್ಟೇಬಲ್ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಇವರು ಈ ರೀತಿ ಪ್ರತಿಭಟನೆ ಕುಳಿತಿರುವುದರಿಂದ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗಿದೆ. ಇವರು ಬೇಕಿದ್ದಲ್ಲಿ ಪುರಸಭೆ ಮುಂಭಾಗ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಿ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.