ಹಾಸನ: ವಿವಿಧ ಜಿಲ್ಲೆಗಳಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.
ಕಳ್ಳತನ ಆರೋಪಿ ಬಂಧನ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾಹಿತಿ ಮುಬಾರಕ್ (25) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ನಗರ, ಮಳ್ಳೂರು ದಿಣ್ಣೆ, ಎಸ್.ಎಸ್.ಟಿ ಕಾಲೇಜು ಬಳಿಯ 14ನೇ ಕ್ರಾಸ್ ನಿವಾಸಿ ಎಂದು ತಿಳಿದುಬಂದಿದೆ. ಈತ ವೆಲ್ಡಿಂಗ್ ಕೆಲಸ ಮಾಡುವವನಾಗಿದ್ದು, ಜಿಲ್ಲೆಯಲ್ಲಿ 6, ಚಿಕ್ಕಮಗಳೂರು ಜಿಲ್ಲೆಯಲ್ಲಿ 6, ತುಮಕೂರು ಜಿಲ್ಲೆಯ 4, ಶಿವಮೊಗ್ಗ ಜಿಲ್ಲೆಯ 3 ಸೇರಿ ಒಟ್ಟು 19 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧಿತ ವ್ಯಕ್ತಿಯಿಂದ 40 ಲಕ್ಷ ರೂ. ಮೌಲ್ಯದ 760 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 100 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಅರಸೀಕೆರೆಯ ಮಹಾಲಕ್ಷ್ಮಿ ಅವರು, ಸೆ.1ರಂದು ಬೆಳಗ್ಗೆ 11.30 ರ ಸಮಯದಲ್ಲಿ ಮನೆಗೆ ಬೀಗ ಹಾಕಿ ಅಂಚೆ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಹಿಂಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದ ಕಳ್ಳ ರೂಮ್ ನ ಕಬೋರ್ಡ್ ನಿಂದ 1,22,900 ರೂ. ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿದ್ದಾನೆ ಎಂದು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ನೀಡಿದ ಬಳಿಕ ತನಿಖೆಗೆ ತಂಡ ರಚಿಸಿ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅ.8 ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತಿಪಟೂರು ನಗರದ ಬಿ.ಹೆಚ್. ರಸ್ತೆಯಲ್ಲಿರುವ ಜ್ಯುವೆಲ್ಲರ್ಸ್ ಮುಂಭಾಗ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ವಿಚಾರಣೆ ವೇಳೆ 19 ಕಳ್ಳತನಗಳನ್ನು ತಾನೊಬ್ಬನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಗರ ಪ್ರದೇಶದಲ್ಲಿನ ಬಹುತೇಕ ಮನೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಕಾರಣ ಈತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮನೆಗಳಲ್ಲೇ ಕಳ್ಳತನ ಮಾಡುತ್ತಿದ್ದ. ಬೈಕ್‌ನಲ್ಲಿ ಸುತ್ತಾಡುತ್ತ ಬೀಗ ಹಾಕಿರುವ ಮನೆಗಳನ್ನು ಚಾಲಾಕಿ ಮಾಡುತ್ತಿದ್ದ. ಅಲ್ಲದೇ, ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಹೊಳೆನರಸೀಪುರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಯ ಪತ್ತೆ ಕಾರ್ಯದಲ್ಲಿ ಅರಸೀಕೆರೆ ಉಪ ವಿಭಾಗದ ಡಿವೈಎಸ್‌ಪಿ ನಾಗೇಶ್, ಅರಸೀಕೆರೆ ಗ್ರಾಮಾಂತರ ವೃತ್ತದ ಸಿಪಿಐ ಕೆ.ಎಂ. ವಸಂತ್, ಪಿಎಸ್‌ಐ ಅರುಣ್‌ಕುಮಾರ್, ಬಸವರಾಜ ಉಪ್ಪದಿನ್ನಿ, ಸಿಬ್ಬಂದಿ ಹೀರಾಸಿಂಗ್, ನಂಜುಂಡೇಗೌಡ, ಲೋಕೇಶ್, ಎ.ಎಸ್. ನಾಗೇಂದ್ರ, ರವಿಪ್ರಕಾಶ್, ಚಿತ್ರಶೇಖರಪ್ಪ, ಹೇಮಂತ, ಹರೀಶ್, ಪುಟ್ಟಸ್ವಾಮಿ, ಪ್ರದೀಪ, ನಾಗರಾಜನಾಯ್ಕ, ಮಧು, ಕೇಶವಮೂರ್ತಿ ಮತ್ತು ಜೀಪ್ ಚಾಲಕ ವಸಂತಕುಮಾರ್, ಸಿದ್ಧೇಶ ಮತ್ತು ತಾಂತ್ರಿಕ ವಿಭಾಗ ಪೀರ್ ಖಾನ್ ಶ್ರಮಿಸಿದ್ದಾರೆ. ಈ ಎಲ್ಲರಿಗೂ ಎಸ್ಪಿ ಶ್ರೀನಿವಾಸ್ ಗೌಡ ಪ್ರಶಂಸನಾ ಪತ್ರ ನೀಡಿದರು.