ಹಾಸನ: ಸಾಹಿತ್ಯದ ರಚನೆಗಳು ದೊಡ್ಡ ಸಾಲುಗಳಾಗಬೇಕಾಗಿಲ್ಲ. ನಾಲ್ಕು ಸಾಲುಗಳಾದರೂ ಸ್ವಂತಿಕೆ ಎನ್ನುವುದು ಇರಬೇಕು. ನಕಲು ಸಾಹಿತ್ಯ ರಚಿಸುವ ಕವಿಗಳು ಯಾರೂ ಆಗಬಾರದು ಎಂದು ಹಿರಿಯ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಕಿವಿಮಾತು ಹೇಳಿದರು.
ನಗರದ ಸಾಲಗಾಮೆ ರಸ್ತೆ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ 4ನೇ ವರ್ಷದ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕವಿಗಳಾದವರಲ್ಲಿ ತಮ್ಮದೇಯಾದ ಸಾಹಿತ್ಯ ಇರಬೇಕು. ಆದರೇ ಇಂದು ಮುಖಪುಟದ ಕವಿಗಳು ಹೆಚ್ಚಾಗಿದ್ದಾರೆ. ಇಂತಹ ಕವಿಗಳು ಎಲ್ಲಾ ಭಾಗಗಳಲ್ಲೂ ಇರುತ್ತಾರೆ. ಸಾಹಿತ್ಯದಲ್ಲಿ ನಾಲ್ಕು ಸಾಲಾದರೂ ಸ್ವಂತಿಕೆ ಇರಲಿ. ಬೇರೆಯವರು ಬರೆದ ಸಾಹಿತ್ಯವನ್ನು ಬರೆಯಬಾರದು ಎಂದು ಸಾಹಿತಿಗಳಿಗೆ ಸಲಹೆ ನೀಡಿದರು.