ಹಾಸನ :ಅನ್ನ ಕೊಡುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ನಿತ್ಯ ಗೋಳು ಕೊಡುತ್ತಿವೆ. ಹಾಗಾಗಿ ಅವುಗಳನ್ನು ಮುಚ್ಚುವುದೇ ಉತ್ತಮ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಷ್ಟ್ರೀಕೃತ ಬ್ಯಾಂಕ್ಗಳು ಉಳ್ಳವರಿಗೆ ಮಾತ್ರ. ರೈತರಿಗೆ ಯಾವ ಸಾಲವನ್ನು ಕೊಡುತ್ತಿಲ್ಲ. 1 ಲಕ್ಷ ರೂ. ಸಾಲ ತೆಗೆದುಕೊಂಡರೆ ವರ್ಷಕ್ಕೆ 5 ಲಕ್ಷ ರೂ. ಹಣ ಕಟ್ಟಿ ಅಂತ ಪೀಡಿಸುತ್ತವೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಇಂತಹ ರಾಷ್ಟ್ರೀಕೃತ ಬ್ಯಾಂಕ್ಗಳನ್ನ ಮುಚ್ಚಲಿ ಎಂದು ರೇವಣ್ಣ ಒತ್ತಾಯ ಮಾಡಿದರು.
ಕೊರೊನಾ ಸಮಯದಲ್ಲಿ ರೈತರು ವಿವಿಧ ಬೆಳೆಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಇದೀಗ ಮಾರುಕಟ್ಟೆಗೆ ಬರುತ್ತಿರುವ ಜೋಳವನ್ನು ಕೆಎಂಎಫ್ ಮೂಲಕವೇ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಲಾಕ್ಡೌನ್ ಹಿನ್ನೆಲೆ ಹಣ್ಣು, ಹೂವು, ತರಕಾರಿ ಬೆಳೆಗಳು ಸೇರಿದಂತೆ ಅಂದಾಜು 104 ಕೋಟಿ ರೂ. ನಷ್ಟವಾಗಿದೆ. ಸರ್ಕಾರ ಇತ್ತಕಡೆ ಗಮನ ಹರಿಸಿಲ್ಲ. ಜೊತೆಗೆ ಮಳೆ ಹಾನಿಗೆ ಇದುವರೆಗೂ ಯಾವ ಪರಿಹಾರವನ್ನು ನೀಡಿಲ್ಲ ಎಂದು ಅವರು ದೂರಿದರು.
ತೋಟಗಾರಿಕ ಬೆಳೆಗಳಲ್ಲಿ ಸಮೀಕ್ಷೆ ಪ್ರಕಾರ ಆಗಷ್ಟ್ ಅಂತ್ಯಕ್ಕೆ 19,23,37000 ರೂ. ನಷ್ಟವಾಗಿದೆ. ಕಾಫಿ ಬೆಳೆಯಲ್ಲಿ 18 ಕೋಟಿ 10 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಮಳೆ ಹಾನಿ ಸೇರಿದಂತೆ ಇತರೆ ಪ್ರಕೃತಿ ವಿಕೋಪದ ಕಾರಣ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ರಾಜ್ಯ ನಾಯಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಒದಗಿಸಲಿ. ಜಿಲ್ಲೆಯ ಹೂವಿನ ಬೆಳೆಗಾರರಿಗೆ ಇದುವರೆಗೆ 7 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆ ಸರಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರ ತಲುಪಿಲ್ಲ. ಇದೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು ಎಂದರು.
ಈ ಬಾರಿ ಜಿಲ್ಲೆಯಲ್ಲಿ ಸುಮಾರು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ನಿರೀಕ್ಷೆ ಇತ್ತು. ಆದರೆ, 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳದ ಇಳುವರಿ ಬರುವ ನಿರೀಕ್ಷೆ ಇದ್ದು, ಇವರಿಗೂ ಸಹ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒಟ್ಟು 6 ಲಕ್ಷ ಟನ್ ಜೋಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಂಡುಕೊಳ್ಳಬೇಕು. ಜೋಳ ಖರೀದಿಯಲ್ಲಿ ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದಾರೆ. ಜೋಳಕ್ಕೆ 1700 ರೂ. ಇದ್ದರೆ ದಲ್ಲಾಳಿಗಳು 1200ಕ್ಕೆ ಖರೀದಿ ಮಾಡಿ ಮತ್ತೆ 1700ಕ್ಕೆ ಮಾರಾಟ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ಹಾಗಾಗಿ ಕೆಎಂಎಫ್ಗೆ ರೈತರು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ರೇವಣ್ಣ ಒತ್ತಾಯಿಸಿದರು.