ಹಾಸನ:ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಹಿಳೆಯರ ಕುಂದು ಕೊರತೆಗಳನ್ನು ವೈಯಕ್ತಿಕವಾಗಿ ಕೇಳುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋನ್-ಇನ್ ಲೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದುಡಿಮೆ ಇಲ್ಲದೇ ಕಷ್ಟದ ಪರಿಸ್ಥಿತಿ, ಬಡ್ಡಿ ದಂಧೆ, ಮನೆ ಬಳಿ ಮದ್ಯ ಕುಡಿದು ನಿವಾಸಿಗಳಿಗೆ ತೊಂದರೆ ಮುಖ್ಯವಾಗಿ ಇಂತಹ ದೂರುಗಳು ಕೇಳಿ ಬಂದಿದ್ದು, ಎಲ್ಲವನ್ನು ತಾಳ್ಮೆಯಿಂದ ಆಲಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್. ನಂದಿನಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.
ಮಹಿಳೆಯರ ಕುಂದು ಕೊರತೆ ಹಾಸನದಲ್ಲಿ ಪೋನ್-ಇನ್ ಲೈವ್ ಕಾರ್ಯಕ್ರಮ ಈ ಕರೆಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಸಮಸ್ಯೆ ಬಗ್ಗೆ ಹೆಚ್ಚು ಮಾತನಾಡಿದ್ದು, ಅದರಲ್ಲೂ ಎರಡನೇ ಮದುವೆಯಾಗಿ ಮೋಸವಾಗಿರುವ ವಿಚಾರವಾಗಿ ಮಹಿಳೆಯರು ಗಮನಸೆಳೆದಿದ್ದಾರೆ. ಇನ್ನು ಕೆಲವರು ಪುಂಡರು ನಮಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಹಾಗೂ ಪ್ರೀತಿಸಿ ಮೋಸ ಮಾಡಿರುವ ಬಗ್ಗೆ ಸೇರಿದಂತೆ ಎಲ್ಲದರ ಬಗ್ಗೆ ನಮ್ಮ ಪೊಲೀಸ್ ಇಲಾಖೆ ಗಮನಹರಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಿಳೆಯರು ನಮ್ಮ ಬಳಿ ಬಂದಾಗ ಅವರ ಕುಂದುಕೊರತೆಯನ್ನು ಪ್ರಾಮಾಣಿಕವಾಗಿ ಆಲಿಸಿ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಬೇರೆ ಇಲಾಖೆಯಲ್ಲಿ ಏನಾದರೂ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಿದ್ದರೆ ಅಂತಹ ಇಲಾಖೆ ಜೊತೆ ಮಾತನಾಡಿ ಚರ್ಚಿಸಿ ವಿಚಾರ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ 'ಸ್ಪಂದನಾ' ಎಂಬ ವಿಭಾಗವನ್ನು ಪ್ರತ್ಯೇಕವಾಗಿ ತೆರೆಯಲಾಗಿದ್ದು, 24 ಗಂಟೆಗಳಲ್ಲೂ ಮಹಿಳೆಯರಿಗಾಗಿ ಸೇವೆಯಲ್ಲಿರುತ್ತದೆ ಎಂದು ಅವರು ಮಾಹಿತಿ ನೀಡಿದ್ರು.
ಕುಟುಂಬದಲ್ಲಿ ಸಮಸ್ಯೆ ಇದ್ದರೆ ಇಲ್ಲಿ ಆಪ್ತ ಸಮಾಲೋಚನೆ ಮತ್ತು ಸಂಬಂಧಪಟ್ಟ ಇಲಾಖೆ ಜೊತೆ ಮಾತನಾಡಿ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ. ಗಂಡ-ಹೆಂಡತಿಯಲ್ಲಿ ವಿರಸ ಇದ್ದಾಗ ಅನೇಕ ಸಾರಿ ಹೊಂದಾಣಿಕೆ ಮಾಡಿ ಕಳುಹಿಸಿರುವ ಉದಾಹರಣೆ ನಡೆದಿದೆ ಎಂದು ಹೇಳಿದರು. ಮಹಿಳೆಯರಿಗೆ ಸಮಸ್ಯೆ ಇದ್ದರೆ ನೇರವಾಗಿ 100 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಹೇಳಬಹುದಾಗಿದೆ. ಇಲ್ಲವೇ ಗುಪ್ತವಾಗಿ ಮಾತನಾಡಬೇಕಾದರೆ ಎಸ್ಪಿ ಕಛೇರಿಯಲ್ಲಿರುವ ಸ್ಪಂದನಾ ವಿಭಾಗದ ಸಂಖ್ಯೆ 081172-268800 ಈ ನಂಬರಿಗೆ ಕರೆ ಮಾಡಿ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ. ಎನ್. ನಂದಿನಿ ತಿಳಿಸಿದರು.