ಹಾಸನ/ತುಮಕೂರು:ಹಾಸನದಲ್ಲಿ ಪೆಟ್ರೋಲ್ ದಂಧೆ ಇಂದು ನಿನ್ನೆಯದಲ್ಲ, ಇದು ದಶಕಗಳಿಂದ ನಡೆಯುತ್ತಿದೆ ಎಂಬ ಆರೋಪಗಳಿವೆ. ಆದ್ರೆ, ಮಾಫಿಯಾ ಹೇಗೆ ನಡೆಯುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲ್ಲ. ಕಂಪನಿಯ ಕಣ್ಣಿಗೆ ಮಣ್ಣೆರೆಚಿ ಮಾಡ್ತಿದ್ದ ದಂಧೆ ಈಗ ಬಯಲಾಗಿದೆ. ಬೇಬಿ ಟ್ಯಾಂಕರ್ ದಂಧೆ ಬಯಲಾಗುತ್ತಿದ್ದಂತೆ ಪೆಟ್ರೋಲ್ ಬಂಕ್ ಮಾಲೀಕರು ಬೆಚ್ಚಿಬಿದ್ದಿದ್ದಾರೆ.
ಬೇಬಿ ಟ್ಯಾಂಕರ್ ಅಳವಡಿಸಿ ಮಾಫಿಯಾ..
ಹಾಸನದ ಹೆಚ್ಪಿಸಿಎಲ್ನಲ್ಲಿರುವ ಘಟಕಕ್ಕೆ ಮಂಗಳೂರಿನ ಪೆಟ್ರೋಲ್ ಪೈಪ್ಗಳ ಮೂಲಕ ತೈಲ ಆಮದಾಗುತ್ತದೆ. ಬಳಿಕ ಅಲ್ಲಿಂದ ರಾಜ್ಯದ ನಾನಾ ಭಾಗಗಳ ಪೆಟ್ರೋಲ್ ಬಂಕ್ಗಳಿಗೆ ಟ್ಯಾಂಕರ್ ಮೂಲಕ ಪೆಟ್ರೋಲ್ ಸರಬರಾಜು ಆಗುತ್ತೆ. ಇಲ್ಲಿ ಪೆಟ್ರೋಲ್ ಟ್ಯಾಂಕರ್ಗಳಿಗೆ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸಿ ನಂತರ ಸೆನ್ಸಾರ್ ಲಾಕ್ ಕೂಡ ಅಳವಡಿಸಲಾಗುತ್ತೆ. ಬಂಕ್ಗಳಿಗೆ ತೆರಳಿದ ಮೇಲೆ ಅಲ್ಲಿ ಅಧಿಕೃತ ವ್ಯಕ್ತಿಗೆ ನೀಡಲಾಗಿರುವ ಡಿಜಿಟಲ್ ಪಾಸ್ವರ್ಡ್ ಬಳಸಿ ಲಾಕ್ ತೆರೆದು ಅಲ್ಲಿಂದ ಟ್ಯಾಂಕ್ಗೆ ಅನ್ ಲೋಡ್ ಮಾಡಲಾಗುತ್ತದೆ. ಇಷ್ಟೆಲ್ಲಾ ನೀತಿ, ನಿಯಮಗಳಿದ್ರೂ, ಮಾರ್ಗಮಧ್ಯದಲ್ಲೇ ಪೆಟ್ರೋಲ್ ಕಳವಾಗುತ್ತಿತ್ತು. ಟ್ಯಾಂಕರ್ನ ಒಳಭಾಗದಲ್ಲಿ ಗೌಪ್ಯವಾಗಿ 150 ಲೀಟರ್ ಸಾಮರ್ಥ್ಯವುಳ್ಳ ಬೇಬಿ ಟ್ಯಾಂಕರ್ ಅಳವಡಿಸಿ ಮಾಫಿಯಾ ಮಾಡ್ತಿದ್ರು.
ಟ್ಯಾಂಕರ್ ಚಾಲಕ ವಶಕ್ಕೆ..
ನಿತ್ಯ 4 ಸಾವಿರಕ್ಕೂ ಹೆಚ್ಚು ಟ್ಯಾಂಕರ್ಗಳು ಹೆಚ್ಪಿಸಿಎಲ್ಗೆ ಬಂದು ಹೋಗುತ್ತವೆ. ಜೂನ್ 28 ರಂದು ಹಾಸನದಿಂದ ಬಂದ ಟ್ಯಾಂಕರ್ವೊಂದು ತುಮಕೂರು ಜಿಲ್ಲೆಯ ತಿಪಟೂರಿನ ಬಂಕ್ನಲ್ಲಿ ಅನ್ಲೋಡ್ ಮಾಡಿದೆ. ನಿಗದಿತ ಪ್ರಮಾಣಕ್ಕಿಂತ ಇಂಧನ ಕಡಿಮೆ ಬಂದ ಹಿನ್ನೆಲೆ, ಬಂಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಸ್ಥಳಕ್ಕೆ ಭೇಟಿ ಕೊಟ್ಟು, ಟ್ಯಾಂಕರ್ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.