ಹಾಸನ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಆದೇಶ ಜಾರಿಯಾದ ದಿನದಿಂದ ಜಿಲ್ಲೆಯಲ್ಲಿ ಅನಗತ್ಯ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸಂಚಾರ ವಿರಳವಾಗಿದ್ದು, ಪೆಟ್ರೋಲ್, ಡೀಸೆಲ್ ಮಾರಾಟ ಶೇ 75 ರಷ್ಟು ಕುಸಿತವಾಗಿದೆ.
ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಆದ್ದರಿಂದ ಕಾರು, ಬೈಕ್ ಹಾಗೂ ಇತರ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಅಲ್ಲದೇ ಜಿಲ್ಲೆಯ ಗಡಿ ಭಾಗದಲ್ಲಿ 15 ಚೆಕ್ ಪೋಸ್ಟ್ ತೆರೆದಿದ್ದು, ಯಾವುದೇ ಅನಗತ್ಯ ವಾಹನ ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ. ಇದರಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ಸಂಖ್ಯೆ ತುಂಬಾ ವಿರಳವಾಗಿದೆ.
ಹಾಸನ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಶೇ. 75 ರಷ್ಟು ಕುಸಿತ ಜಿಲ್ಲೆಯಲ್ಲಿ ವಿವಿಧ ಕಂಪನಿಯ 146 ಪೆಟ್ರೋಲ್ ಬಂಕ್‍ಗಳಿವೆ. ಎಲ್ಲ ಪೆಟ್ರೋಲ್ ಬಂಕ್ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಬೆಳಗ್ಗೆ 6 ರಿಂದ 12 ಗಂಟೆ ವರೆಗೆ ಸಾರ್ವಜನಿಕರಿಗೆ ಇಂದನ ನೀಡಲಾಗುತ್ತದೆ. 12 ಗಂಟೆಯ ನಂತರ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ವಾಹನಗಳು ಹಾಗೂ ತುರ್ತು ವಾಹನಗಳಿಗೆ ಮಾತ್ರವೇ ಇಂದನ ನೀಡಲಾಗುತ್ತಿದೆ.
ಇನ್ನು ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಪೆಟ್ರೋಲ್, ಡೀಸೆಲ್ ನೀಡಲಾಗುತ್ತಿದೆ. ವ್ಯಾಪಾರದ ಮೇಲೆಯೆ ಮಾಲೀಕರಿಗೆ ಕಮಿಷನ್ ನಿಗದಿಯಾಗಿರುತ್ತದೆ. ಲಾಕ್‍ಡೌನ್ ಹಿನ್ನೆಲೆ ವ್ಯಾಪಾರವೇ ಇಲ್ಲದಿದ್ದರೂ ನೌಕರರನ್ನು ಕಡಿತ ಮಾಡದೇ ನಷ್ಟದಲ್ಲಿಯೇ ಬಂಕ್ ನಿರ್ವಹಣೆ ಮಾಡ ಬೇಕಾದ ಅನಿವಾರ್ಯತೆ ಇದೆ. ಬಂಕ್ ಮಾಲೀಕರು ಶ್ರೀಮಂತರು ಎಂಬ ಭಾವನೆ ಜನರಲ್ಲಿದೆ ಆದರೆ, ವಾಸ್ತವವಾಗಿ ಶೇ 70 ರಷ್ಟು ಬಂಕ್ ಮಾಲೀಕರು ಸಾಲ ಪಡೆದೇ ಬಂಕ್ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ವಿವರಿಸಿದರು.
ಲಾಕ್‍ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಹಾಗೂ ಶಿಸ್ತು ಕಾಪಾಡುವಂತೆ ನೋಡಿಕೊಳ್ಳಲು ಒಂದು ಬಂಕ್ ಗೆ ಒಬ್ಬ ಪೊಲೀಸ್ ಸಿಬ್ಬಂದಿ ಇಲ್ಲವೆ ಗೃಹ ರಕ್ಷಕ ಸಿಬ್ಬಂದಿ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಕೇಳಿಕೊಂಡಿದ್ದೆವು. ಆದರೆ, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ಯಾರನ್ನೂ ನೇಮಿಸಿಲ್ಲ. ಆದ್ದರಿಂದ ಈ ಕಾರ್ಯವನ್ನು ಬಂಕ್ ನೌಕರರೆ ನಿರ್ವಹಿಸುತ್ತಿದ್ದಾರೆ.
ಬಂಕ್‍ನಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಆರೋಗ್ಯದ ಕುರಿತು ಎಲ್ಲ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ ಎಂದರು.