ಹಾಸನ:ಎಟಿಎಂನಿಂದ ಹಣ ತೆಗೆಯಲು ಬರದವರಿಗೆ ಸಹಾಯ ಮಾಡುತ್ತೇನೆ ಎಂದು ನಂಬಿಸಿ ಅವರಿಂದ ಕಾರ್ಡ್ ಪಡೆದ ಹಣ ದೋಚುತ್ತಿದ್ದ ಆರೋಪಿಯನ್ನು ಜಿಲ್ಲಾ ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.
ರಂಗೇನಹಳ್ಳಿ ಗ್ರಾಮದ ಆನಂದ್ (35) ಬಂಧಿತ ಆರೋಪಿ. ಎಟಿಎಂನಲ್ಲಿ ಹಣ ತೆಗೆಯಲು ಬರುವ ವೃದ್ಧರು, ಅನಕ್ಷರಸ್ಥರು ಹಾಗೂ ಅಮಾಯಕರನ್ನು ಗುರಿಯಾಗಿಟ್ಟುಕೊಂಡು ಸಹಾಯ ಮಾಡುವುದಾಗಿ ಅವರಿಂದ ಎಟಿಎಂ ಕಾರ್ಡ್ ಪಡೆಯುತ್ತಿದ್ದ. ಬಳಿಕ ಪಾಸ್ವರ್ಡ್ ಕೇಳಿ, ನಂತರ ಹಣ ತೆಗೆದುಕೊಟ್ಟು ಅವರೊಂದಿಗೆ ಮಾತನಾಡುತ್ತಾ, ಅವರಿಗೆ ತಿಳಿಯದಂತೆ ಕಾರ್ಡ್ ಅನ್ನು ಬದಲಾಯಿಸಿ ಪರಾರಿಯಾಗುತ್ತಿದ್ದ. ಹೀಗೆ ಮಾಡಿ ಸುಮಾರು ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ್ದಾನೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿ ಈತ ಹಾಸನ, ಅರಸೀಕೆರೆ, ತಿಪಟೂರು,ಗಂಡಸಿ, ದುದ್ದ ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಸುಮಾರು 3.93 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾನೆ. ಸದ್ಯ ಈತನಿಂದ 4 ಎಟಿಎಂ ಕಾರ್ಡ್, 1.8 ಲಕ್ಷ ರೂ. ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:ಕಟ್ಟಾಯ ಹೋಬಳಿಯ ಹುಚ್ಚೇಗೌಡ ಎಂಬವರು ಹಾಸನದ ಬಿ. ಎಂ. ರಸ್ತೆಯ ಹೆಚ್ಡಿಸಿಸಿ ಬ್ಯಾಂಕ್‌ನ ಎಟಿಎಂನಲ್ಲಿ ಕಳೆದ ಸೆಪ್ಟೆಂಬರ್ 4ರಂದು ಹಣ ಪಡೆಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ತಾನು ನಿಮಗೆ ಹಣ ತೆಗೆದುಕೊಡುತ್ತೇನೆಂದು ಹೇಳಿ ನಂಬಿಸಿ ಅವರ ಎಟಿಎಂ ಕಾರ್ಡ್ ಮತ್ತು ಸೀಕ್ರೆಟ್ ನಂಬರ್ ಪಡೆದು 7,000 ಹಣ ಡ್ರಾ ಮಾಡಿಕೊಟ್ಟಿದ್ದಾನೆ. ನಂತರ ಬದಲಿ ಎಟಿಎಂ ಕಾರ್ಡ್ ಕೊಟ್ಟು ಪರಾರಿಯಾಗಿದ್ದಾನೆ. ಹುಚ್ಚೇಗೌಡರು ಆಕ್ಟೋಬರ್ 3ರಂದು ಎಟಿಎಂನಲ್ಲಿ ಹಣ ಪಡೆಯಲು ಹೋದಾಗ ಹಣ ಬಾರದ ಕಾರಣ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ 23 ಸಾವಿರ ರೂ ಹಣ ದೋಚಿರುವುದು ಪತ್ತೆಯಾಗಿದೆ. ಬಳಿಕ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಂದಿನಿ ಅವರ ಉಸ್ತುವಾರಿಯಲ್ಲಿ, ಸಿಇಎನ್ ಪೊಲೀಸ್ ನಿರೀಕ್ಷಕ ದೇವೇಂದ್ರಪ್ಪನವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡರು. ಅಕ್ಟೋಬರ್ 13ರ ಸಂಜೆ 5ರ ಸಮಯದಲ್ಲಿ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆನಂದನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತ 9 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದ್ದು, ಈಗಾಗಲೇ ಈತನ ವಿರುದ್ಧ ಹುಬ್ಬಳ್ಳಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಶ್ರೀನಿವಾಸಗೌಡ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಪಿಐ ದೇವೇಂದ್ರ ಎಂ.ಎಸ್ , ಗಿರೀಶ್, ಶ್ರೀನಾಥ್ , ರಂಗಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳಿಗೆ ಪ್ರಶಂಸಾ ಪತ್ರವನ್ನು ಎಸ್ಪಿ ವಿತರಿಸಿದರು.