ಕರ್ನಾಟಕ

karnataka

ETV Bharat / state

ಅಕ್ರಮ ಕಲ್ಲುಗಣಿಗಾರಿಕೆ ಆವಾಸ ಸ್ಥಾನವಾದ ಹಂದಿಕಟ್ಟೆ ಬಾರೆ ಪ್ರದೇಶ: ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ - Arakalgudu Mining News

ಅರಕಲಗೂಡಿನ ಹಂದಿಕಟ್ಟೆ ಬಾರೆ ಪ್ರದೇಶದ 37 ಎಕರೆ ಸರ್ಕಾರಿ ಗೋಮಾಳದ ಜಾಗದಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ.ಇದರಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಹಂದಿಕಟ್ಟೆ ಬಾರೆ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ
ಹಂದಿಕಟ್ಟೆ ಬಾರೆ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ

By

Published : Jan 5, 2021, 1:41 AM IST

ಅರಕಲಗೂಡು: ಪಟ್ಟಣದ ಹೊರವಲಯದಲ್ಲಿರುವ ಹಂದಿಕಟ್ಟೆ ಬಾರೆ ಪ್ರದೇಶ ಅಕ್ರಮ ಕಲ್ಲುಗಣಿಗಾರಿಕೆಗೆ ಆವಾಸ ಸ್ಥಾನವಾಗಿದೆ. ಹಂದಿಕಟ್ಟೆ ಬಾರೆ ಅರಕಲಗೂಡು ಗ್ರಾಮದ ಸ.ನಂ 240ರಲ್ಲಿ ಸುಮಾರು 37 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ ಮತ್ತು ಪರಿಸರ, ಜೀವಿಶಾಸ್ತ್ರ, ಪರಿಸರಮಾಲಿನ್ಯ ಮಂಡಳಿ ಅಕ್ರಮ ವಿರುದ್ದ ಕೈಗೊಳ್ಳುವ ಕಠಿಣ ಕಾನೂನು ಕ್ರಮ ವಿರಳವಾಗಿದೆ. ಸರಿಸುಮಾರು 37 ಎಕರೆ ಸರ್ಕಾರಿ ಗೋಮಾಳದ ಜಾಗದಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕಲ್ಲಿಗಾಗಿ ದೊಡ್ಡ ಗಾತ್ರದ ಮಣ್ಣುಗುಡ್ಡ ಅಗೆಯಲಾಗುತ್ತಿದ್ದು, ನೂರಾರು ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಇದರಿಂದಾಗಿ ಸುತ್ತಮುತ್ತಲ ಗ್ರಾಮಗಳಾದ ಅಡಿಕೆಬೊಮ್ಮನಹಳ್ಳಿ, ಅರೆಮಾದನಹಳ್ಳಿ, ಬಿದುರುಮಾಳೆಕೊಪ್ಪಲು, ಕೋಟೆಹಿಂದಲಕೊಪ್ಪಲು, ಮಂಡಿಕೇರಿ, ಮತ್ತು ಸುಭಾಷ್ ನಗರಗಳ ನಿವಾಸಿಗಳು ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಹಂದಿಕಟ್ಟೆ ಬಾರೆ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ

ಪ್ರತಿದಿನ ರಾತ್ರಿ ಬಂಡೆ ಸಿಡಿಸಲು ಬೋರ್​ವೆಲ್​ ಡ್ರಿಲ್​ನಿಂದ 50ರಿಂದ 100 ಅಡಿ ಆಳ ಕೊರೆದು ಸ್ಫೋಟಿಸಲಾಗುತ್ತಿದೆ. ಪ್ರತಿ ದಿನ 5-6 ಲಾರಿಯಲ್ಲಿ ಜಲ್ಲಿಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಭೂಮಿ ನಡುಗುತ್ತವೆ. ಮನೆಯಲ್ಲಿರುವ ಪಾತ್ರೆ ಸಾಮಗ್ರಿಗಳು ಅಲುಗಾಡಿ ಬೀಳುತ್ತಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟು ಬಡವರ ಮನೆಗಳು ನೆಲಕ್ಕುರುಳುವ ಹಂತಕ್ಕೆ ತಲುಪಿವೆ. ಇನ್ನು ಸುತ್ತಮುತ್ತಲ ಜಮೀನುಗಳನ್ನು ರೈತರು ಬೆಳೆಗಳನ್ನು ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಈ ಕಲ್ಲುಗಣಿಗಾರಿಕೆಯ ಸುತ್ತಮುತ್ತ ಇರುವ ಸಾವಿರಾರು ಎಕರೆ ನೀರಾವರಿ ಜಮೀನಾಗಿದೆ. ಭತ್ತ, ರಾಗಿ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಿದ್ದರು. ಕಲ್ಲುಗಣಿಗಾರಿಕೆಯಿಂದ ಸಿಡಿದ ಕಲ್ಲುಗಳು ಜಮೀನುಗಳಲ್ಲಿ ಬಂದುಬೀಳುತ್ತಿವೆ. ಇದರಿಂದ ರೈತರು ಬೆಳೆಗಳನ್ನು ಬೆಳೆಯಲಾಗದೇ ಕೈಚೆಲ್ಲಿ ಕುಳಿತಿದ್ದಾರೆ.

ಪ್ರತಿದಿನ ಸಂಜೆ ಅಕ್ರಮವಾಗಿ ಸ್ಪೋಟಕ ಬಳಸಿ ಕಲ್ಲುಗಳನ್ನು ಸಿಡಿಸಲಾಗುತ್ತಿದೆ. ತಲ್ಲಣ ಮೂಡಿಸುವ ಭಾರೀ ಶಬ್ಧದಿಂದಾಗಿ ವಿದ್ಯಾರ್ಥಿಗಳು, ಪುಟ್ಟಮಕ್ಕಳು, ರೋಗಿಗಳು ಮತ್ತು ಹಿರಿಯರಿಗೆ ತೊಂದರೆ ಉಂಟಾಗುತ್ತಿದೆ. ಕಲ್ಲುಗಳನ್ನು ತುಂಬಿಕೊಂಡು ಅಡ್ಡಾದಿಡ್ಡಿಯಾಗಿ ಸಾಗುವ ಟ್ರ್ಯಾಕ್ಟರ್​ಗಳು ಮತ್ತು ಲಾರಿಗಳಿಂದ ರಸ್ತೆಯಲ್ಲಿ ಸಾಗುವವರಿಗೆ ಜೀವ ಭಯ ಉಂಟು ಮಾಡುತ್ತಿವೆ.

ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಂದಿಕಟ್ಟೆ ಬಾರೆ ಪ್ರದೇಶದಲ್ಲಿ ಈ ಹಿಂದೆ ವಸತಿ ಯೊಜನೆ ಅನುಷ್ಥಾನಕ್ಕೆ ಪ್ರಯತ್ನ ನಡೆದಿತ್ತು. ಆದರೆ ಅದು ಕೈಗೂಡುವ ಲಕ್ಷಣಗಳು ಕಾಣುತ್ತಿಲ್ಲ. ಹಾಗೆಯೇ ಪಟ್ಟಣದ ಬೇರೆ ಬೇರೆ ಸಮುದಾಯದವರು ಇಲ್ಲಿ ಹೆಣ ಹೂಳುವ, ಸುಡುವ ಕ್ರಿಯೆಗಳನ್ನು ಮಾಡುತ್ತಿದ್ದರು. ಆದರೆ ಇದೀಗ ಅವುಗಳಿಗೂ ಅವಕಾಶವಿಲ್ಲದಂತಾಗಿದೆ. ಪಟ್ಟಣ ಪಂಚಾಯಿತಿ ಹಂದಿಕಟ್ಟೆ ಬಾರೆ ಅಕ್ರಮಗಳ ಕುರಿತು ದೂರು ದಾಖಲಿಸಬೇಕಿದೆ. ಇತರೆ ಸಂಬಂಧಿತ ಇಲಾಖೆಗಳು ಕೂಡ ಸುಮೋಟೋ ಪ್ರಕರಣ ದಾಖಲಿಸಬೇಕಿದೆ ಎಂಬುದು ಗ್ರಾಮಸ್ಥರ ಚಿಂತೆಯಾಗಿದೆ.

ABOUT THE AUTHOR

...view details