ಹಾಸನ:ಸಕಲೇಶಪುರ ತಾಲೂಕಿನ ಆನೆಮಹಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮದುವೆಗೆ ದಿಬ್ಬಣ ತೆರಳುತ್ತಿದ್ದ ಬಸ್ ಪಲ್ಟಿಯಾಗಿದ್ದು, ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಮಂಡ್ಯ ಮೂಲದ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಮತ್ತು ಕನಕಪುರ ತಾಲೂಕಿನ ಚಿಕ್ಕಳಾಹಳ್ಳಿ ಗ್ರಾಮದ ಕೀರ್ತಿ ಎಂಬುವರ ಮದುವೆ ಗುರುವಾರ ಧರ್ಮಸ್ಥಳದಲ್ಲಿ ನೆರವೇರಬೇಕಿತ್ತು. ನಿಡಘಟ್ಟ ಗ್ರಾಮದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಬಸ್, ಸಕಲೇಶಪುರದ ಹೊರವಲಯದ ಆನೆಮಹಲ್ ಬಳಿಯ ದುರ್ಗಾಂಬ ರೈಸ್ ಮಿಲ್ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿದೆ. ಇದಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗವೇ ಕಾರಣ ಎನ್ನಲಾಗಿದೆ.
ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿದ್ದು, ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚನ್ನಯ್ಯ ಮತ್ತು ಸಿದ್ದರಾಜು ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಗಿದೆ. ಉಳಿದ ಗಾಯಾಳುಗಳು ಸ್ಥಳೀಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಪಲ್ಟಿಯಾದ ಹಿನ್ನೆಲೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಪೊಲೀಸರು ಸ್ಥಳೀಯರ ಸಹಾಯದಿಂದ ಕ್ರೇನ್ ಬಳಸಿ ಪಲ್ಟಿಯಾದ ಬಸ್ಸನ್ನು ಮೇಲಕ್ಕೆತ್ತಿದರು. ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.