ಹಾಸನ : ಪಿಜಿ ಬಾಡಿಗೆ ನೀಡಿಲ್ಲ ಎಂದು ಇಬ್ಬರು ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.
ಪಿಜಿಗೆ ಬಾಡಿಗೆ ಕಟ್ಟಲು ಯುವತಿಯರು ಹಣ ಇಲ್ಲ ಎಂದಿದ್ದಕ್ಕೆ ಮಾಲೀಕ ಮಾಡಿದ್ದೇನು?
ಹಾಸನದ ಪಿಜಿಯೊಂದರಲ್ಲಿ ತಂಗಿದ್ದ ಯುವತಿಯರಿಬ್ಬರು ಲಾಕ್ಡೌನ್ಗಿಂತ ಮೊದಲು ತಮ್ಮ ಊರುಗಳಿಗೆ ತೆರಳಿದ್ದರು. ತಮ್ಮ ಲಗೇಜ್ ತೆಗೆದುಕೊಂಡು ಹೋಗಲು ಇಬ್ಬರೂ ಇಂದು ಪಿಜಿಗೆ ಬಂದಿದ್ದರು. ಇವರನ್ನು ನೋಡಿದ್ದೇ ತಡ ಪಿಜಿ ಮಾಲೀಕ ಸಿಟ್ಟಾಗಿದ್ದಾನೆ. ಮೊದಲು ಬಾಡಿಗೆ ಹಣ ನೀಡಿ ಎಂದು ಯುವತಿಯರಿಗೆ ಜೋರು ಮಾಡಿ, ಇಬ್ಬರನ್ನೂ ಕೂಡಿ ಹಾಕಿದ್ದಾನೆ.
ಹಾಸನದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಯುವತಿಯರಿಬ್ಬರು ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಮನೆಗೆ ತೆರಳಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ. ಇಂದು ಬಟ್ಟೆ, ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಬಾಡಿಗೆ ಕಾರು ಮಾಡಿಕೊಂಡು ಪಿಜಿಗೆ ಬಂದಾಗ, ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಒತ್ತಾಯಿಸಿದ್ದನು.
ತಮ್ಮಲ್ಲಿ ಈಗ ಹಣವಿಲ್ಲ ಎಂದು ಯುವತಿಯರು ಕಷ್ಟ ಹೇಳಿಕೊಂಡಿದ್ದರು. ಅವರ ಮಾತು ಕೇಳಿಸಿಕೊಳ್ಳದ ಪಿಜಿ ಮಾಲೀಕ ಇಬ್ಬರನ್ನೂ ಪಿಜಿಯಲ್ಲೇ ಕೂಡಿ ಹಾಕಿದ್ದಾನೆ. ಯುವತಿಯರಿಬ್ಬರು ತಿಂಡಿಯಿಲ್ಲದೆ ಪಿಜಿಯಲ್ಲಿ ಲಾಕ್ ಆಗಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು, ಇಬ್ಬರೂ ಯುವತಿಯರನ್ನು ಬಿಡುಗಡೆಗೊಳಿಸಿ ವಿಚಾರಣೆ ನಡೆಸುತ್ತಿದ್ದಾರೆ.